canaratvnews

ಪೆರುವಾಯಿ ಚರ್ಚ್‌ನಲ್ಲಿ ಕ್ರೈಸ್ತ ಶಿಕ್ಷಣ ವರ್ಷದ ಪ್ರಾರಂಭೋತ್ಸವ ಹಾಗೂ ಸಾಧಕರಿಗೆ ಸನ್ಮಾನ

ವಿಟ್ಲ ,ಜೂನ್ 07: ಮಂಗಳೂರು ಕ್ಯಾಥೋಲಿಕ್ ಧರ್ಮಕ್ಷೇತ್ರದ ಪೆರುವಾಯಿ ಮುಚ್ಚಿರಪದವಿನಲ್ಲಿರುವ ಫಾತಿಮಾ ಮಾತೆಯ ದೇವಾಲಯದಲ್ಲಿ 2026-27ನೇ ಸಾಲಿನ ಕ್ರೈಸ್ತ ಶಿಕ್ಷಣ ವರ್ಷದ ಪ್ರಾರಂಭೋತ್ಸವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಜೂನ್ 07ರ ಭಾನುವಾರದಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಶೈಕ್ಷಣಿಕ ವರ್ಷವನ್ನು ” ಆಮ್ಚಿಂ ಭುರ್ಗಿಂಬಾಳಾಂ, ದೆವಾಚ್ಯಾ ರಾಜಾಚಿಂ ಫಳಾಂ” ( ನಮ್ಮ ಮಕ್ಕಳು, ದೇವರ ರಾಜ್ಯದ ಫಲಗಳು) ಎಂಬ ಅರ್ಥಪೂರ್ಣ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿತ್ತು. ಚರ್ಚ್‌ನ ಧರ್ಮಗುರುಗಳು, ಕ್ರೈಸ್ತ ಶಿಕ್ಷಣದ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಪಾಲನಾ ಮಂಡಳಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಹೊಸ ಶಿಕ್ಷಣ ವರ್ಷವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಹೆನ್ರಿ ಡಿಸೋಜ ಇವರ ಸ್ಮರಣಾರ್ಥವಾಗಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿನಿಯರಾದ ರಿನಿಶಾ ಡಿಸೋಜ (572/625) ಮತ್ತು ಲೈನಿಯಾ ಡಿಸೋಜ (550/625) ಇವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರುಗಳಾದ ವಂದನೀಯ ಫಾ. ಸೈಮನ್ ಡಿಸೋಜ, ಬ್ರದರ್ ಪ್ರಿತೇಶ್ ಪಿಂಟೊ ಪ್ರಮುಖರಾದ ಶ್ರೀಮತಿ ಕ್ರೀಸ್ತಿನ್ ಡಿಸೋಜ ಕಡೆಂಗೋಡ್ಲು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಡೆನಿಸ್ ಮೊಂತೆರೊ ಹಾಗೂ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ಉಪಸ್ಥಿತರಿದ್ದರು. ಸಂತೋಷ್ ಮೊಂತೆರೊ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Share News
Exit mobile version