ವಿಟ್ಲ,ಪೆರುವಾಯಿ: ಭಾರತೀಯ ಭೂಸೇನೆಯಲ್ಲಿ ಕಳೆದ 23 ವರ್ಷಗಳ ಕಾಲ ಸುದೀರ್ಘ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ, ‘ACP ನಾಯಬ್ ಸುಬೇದಾರ್’ ಹುದ್ದೆಗೆ ಪದೋನ್ನತಿ ಪಡೆದು ಇತ್ತೀಚೆಗೆ ಸೇವಾನಿವೃತ್ತರಾದ ಪೆರುವಾಯಿಯ ಹೆಮ್ಮೆಯ ವೀರಯೋಧ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಅವರಿಗೆ ಹುಟ್ಟೂರಿನ ಸಾರ್ವಜನಿಕ ಸನ್ಮಾನ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ 27ರ ಆದಿತ್ಯವಾರ ಭವ್ಯ ಹುಟ್ಟೂರ ಸನ್ಮಾನ ಹಾಗೂ ಬೃಹತ್ ತಿರಂಗಾ ವಾಹನ ಜಾಥಾ ಆಯೋಜಿಸಲಾಗಿದೆ.

ಬೃಹತ್ ತಿರಂಗಾ ವಾಹನ ಜಾಥಾ:
ಯೋಧನ ಗೌರವಾರ್ಥವಾಗಿ ಸಂಜೆ 4 ಗಂಟೆಗೆ ಪೆರುವಾಯಿ ಗ್ರಾಮ ಪಂಚಾಯತ್ ವಠಾರದಿಂದ ಫಾತಿಮಾ ಮಾತಾ ಸಮುದಾಯ ಭವನದವರೆಗೆ ಬೃಹತ್ ತಿರಂಗಾ ವಾಹನ ಜಾಥಾ ನಡೆಯಲಿದೆ.

ಸಭಾ ಕಾರ್ಯಕ್ರಮ ಮತ್ತು ಸನ್ಮಾನ:
ಸಾಯಂಕಾಲ 6:30ಕ್ಕೆ ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ. ಪೆರುವಾಯಿ ಗುತ್ತು ಶ್ರೀ ರಾಜೇಂದ್ರನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸರ್ವಧರ್ಮದ ಮುಖಂಡರ ಸಮಾಗಮ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸರ್ವಧರ್ಮದ ಧರ್ಮಗುರುಗಳು ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ:

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಕ್ಕಾಜೆ- ಮಾಣಿಲ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಶ್ರೀ ಶ್ರೀ ಕೃಷ್ಣ ಗುರೂಜಿ, ಪೆರುವಾಯಿ ಬದ್ರಿಯಾ ಜುಮಾ ಮಸೀದಿಯ ಧರ್ಮಗುರುಗಳಾದ ಮುಹಮ್ಮದ್ ಶರೀಫ್ ಮದನಿ, ಪೆರುವಾಯಿ ಫಾತಿಮಾ ಮಾತೆಯ ಚರ್ಚ್ನ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿಸೋಜಾ, ಪೆರುವಾಯಿ ಮುಹಿಯ್ಯದ್ದೀನ್ ಜುಮಾ ಮಸೀದಿಯ ಧರ್ಮಗುರುಗಳಾದ ಜಾಫರ್ ಸ್ವಾದಿಖ್ ಬಾಐವಿ ಅಲ್ ಯಮಾನಿ ಉಪಸ್ಥಿತರಿರಲಿದ್ದಾರೆ.
ಪ್ರಗತಿಪರ ಕೃಷಿಕರಾದ ಶ್ರೀ ಕೃಷ್ಣಪ್ರಸಾದ್ ಕಡಂಬಿಲ, ಬಾಳೆಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಶ್ರೀ ಕೊರಗಪ್ಪ ಪೂಜಾರಿ ಬಾಳೆಕಲ್ಲು, ಕಲ್ಲಡ್ಕದ ಶ್ರೀ ರಾಮಣ್ಣ ಪೂಜಾರಿ ಹಾಗೂ ಯೋಧನ ಮಾತೃಶ್ರೀ ಶ್ರೀಮತಿ ಸುಂದರಿ ಕಲ್ಲಡ್ಕ ಪೆರುವಾಯಿ ಭಾಗವಹಿಸಲಿದ್ದಾರೆ.

ಎರಡು ಬಾರಿ ಸೇನಾ ಪ್ರಶಂಸಾ ಪತ್ರದ ಗೌರವ:
ಯೋಧ ಚಂದ್ರಶೇಖರ ಪೂಜಾರಿಯವರು 2003 ರಿಂದ 2026 ರವರೆಗೆ ಸೇನೆಯಲ್ಲಿ ಸಲ್ಲಿಸಿದ ಪ್ರಾಮಾಣಿಕ ಸೇವೆಗಾಗಿ ಹಿರಿಯ ಸೇನಾಧಿಕಾರಿ ಗಳಿಂದ ಎರಡು ಬಾರಿ ಸೇನೆಯ ಪ್ರಶಂಸಾ ಪತ್ರವನ್ನು ಪಡೆದಿದ್ದಾರೆ.
ದೇಶಪ್ರೇಮದ ಈ ಅಪೂರ್ವ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಬಂಧು-ಭಗಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಾರ್ವಜನಿಕ ಸನ್ಮಾನ ಸಮಿತಿ ಪೆರುವಾಯಿ ಪ್ರಕಟಣೆಯಲ್ಲಿ ವಿನಂತಿಸಿದೆ.
