LATEST NEWS

ನ. 6: ಮಂಗಳೂರಿನಲ್ಲಿ ಬಿಜೆಪಿ ಬೃಹತ್ ಪಾದಯಾತ್ರೆ, ಸಾರ್ವಜನಿಕ ಸಭೆ; ಕೇಂದ್ರ ಸಚಿವ ಸುರೇಶ್ ಗೋಪಿ ಭಾಗಿ

ಮಂಗಳೂರು: ಬಿಜೆಪಿ ಮಂಗಳೂರು ವಿಭಾಗದ ವತಿಯಿಂದ “ಪ್ರಜಾಪ್ರಭುತ್ವವನ್ನು ಉಳಿಸಿ ಅರಾಜಕತೆಯನ್ನು ಅಳಿಸಿ” ಎಂಬ ಬೃಹತ್ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಯನ್ನು ನವೆಂಬರ್ 6ರಂದು ಹಮ್ಮಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಅಂದು ಸಂಜೆ 3 ಗಂಟೆಗೆ ಮಂಗಳೂರಿನ ಕುದ್ಮಲ್ ರಂಗರಾವ್ ಪುರ ಭವನದ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಪ್ರಮುಖ ರಸ್ತೆಗಳ ಮೂಲಕ ಸಾಗಿ ಕದ್ರಿ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ. ತದನಂತರ ಕದ್ರಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರಾದ ಸುರೇಶ್ ಗೋಪಿ ಅವರು ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ.

ಈ ಬೃಹತ್ ಅಭಿಯಾನದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಂಗಳೂರು ಕಚೇರಿಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯ ಬಳಿಕ ಪದಾಧಿಕಾರಿಗಳ ತಂಡವು ಪಾದಯಾತ್ರೆ ಆರಂಭಗೊಳ್ಳುವ ಪುರಭವನ ಹಾಗೂ ಸಮಾಪನಗೊಳ್ಳುವ ಕದ್ರಿ ಮೈದಾನದ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಣೆ ಹಾಗೂ ಸಿದ್ಧತೆಗಳ ಪರಿಶೀಲನೆ ನಡೆಸಿತು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರ್ ನವೀನ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರಮುಖ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆ ತಿಳಿಸಿದೆ.

Share News