ಮಂಗಳೂರು: ಆಗಸ್ಟ್ 15; ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ ನಗರದ ಬೋಳೂರಿನ ಸುಲ್ತಾನ್ ಬತ್ತೇರಿ ಬಳಿಯ ಸ್ವಸ್ತಿಕ್ ರಿವರ್ ಫ್ರಂಟ್‌ನಲ್ಲಿ “ಆಟಿದ ಐಸಿರ” ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಲವು ಗಣ್ಯರು ಕಂಬಳದ ಕೋಣಗಳಿಗೆ ಹಿಂಡಿ ಮತ್ತು ಅವಲಕ್ಕಿ ಸಮರ್ಪಿಸುವ ಮೂಲಕ ಈ ವಿಶಿಷ್ಟ ಆಟಿ ಆಚರಣೆಗೆ ಚಾಲನೆ ನೀಡಿದರು.

ಹಿರಿಯರ ನಂಬಿಕೆಗಳ ಹಿಂದೆ ವೈಜ್ಞಾನಿಕ ಹಿನ್ನೆಲೆಯಿದೆ: ಶಾಸಕ ವೇದವ್ಯಾಸ ಕಾಮತ್
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು, “ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗಿವೆ. ಅಂದಿನ ಹೋರಾಟದಲ್ಲಿ ನಮ್ಮ ತುಳುನಾಡಿನ ಹಲವು ವೀರರು ಭಾಗಿಯಾಗಿದ್ದು, ಈ ಮಣ್ಣಿನಲ್ಲೇ ವೀರತ್ವದ ಗುಣವಿದೆ. ಜಾನಪದ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿರುವ ಈ ತುಳುನಾಡಿನಲ್ಲಿ ಜುಲೈ-ಆಗಸ್ಟ್ ತಿಂಗಳಿನಲ್ಲಿ ಆಟಿ ಕಳಂಜದ್ದೇ ಸುದ್ದಿ” ಎಂದರು.

ಮುಂದುವರಿದು ಮಾತನಾಡಿದ ಅವರು, “ನಮ್ಮ ಹಿರಿಯರು ಯಾವುದೇ ಮೂಢನಂಬಿಕೆಗಳನ್ನು ಹುಟ್ಟುಹಾಕಲಿಲ್ಲ. ಅವರ ಪ್ರತಿಯೊಂದು ನಂಬಿಕೆಯ ಹಿಂದೆಯೂ ದೃಢವಾದ ವೈಜ್ಞಾನಿಕ ಹಿನ್ನೆಲೆ ಇರುವುದೇ ನಮ್ಮ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ. ನಮ್ಮ ಹಿರಿಯರು ಆಟಿಯ ಕಷ್ಟದ ಕಾಲದಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಟ್ಟು, ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನೇ ಬಳಸಿಕೊಂಡು ಹೇಗೆ ಆರೋಗ್ಯಕರವಾಗಿ ಬದುಕಿದರು ಎಂಬುದನ್ನು ಇಂದಿನ ಪೀಳಿಗೆಗೆ ಪರಿಚಯಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ” ಎಂದು ತಿಳಿಸಿದರು.

ಗ್ರಾಮೀಣ ಕ್ರೀಡೆಗಳು ಮತ್ತು ಸಾಂಸ್ಕೃತಿಕ ವೈಭವ: ಕಾರ್ಯಕ್ರಮದಲ್ಲಿ ತುಳುನಾಡಿನ ಸಾಂಪ್ರದಾಯಿಕ ಮತ್ತು ಜನಪದ ಕ್ರೀಡೆಗಳಾದ ಕೋಳಿ ಅಂಕ ಹಾಗೂ ತೆಂಗಿನಕಾಯಿ ಕಟ್ಟುವುದು ಸೇರಿದಂತೆ ಮುಂತಾದ ಗ್ರಾಮೀಣ ಸೊಗಡಿನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಬಿಜೆಪಿ ಮಂಡಲದ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ತುಳುನಾಡಿನ ಜನಪ್ರಿಯ ಗೀತೆಗಳಿಗೆ ಉತ್ಸಾಹದಿಂದ ಹೆಜ್ಜೆ ಹಾಕಿದರು. ಕರಾವಳಿಯ ಹೆಮ್ಮೆಯ ಕಲೆಯಾದ ಹುಲಿವೇಷ ನೃತ್ಯವು ಕಾರ್ಯಕ್ರಮದ ರಂಗನ್ನು ಮತ್ತಷ್ಟು ಹೆಚ್ಚಿಸಿತು.

ಆಕರ್ಷಿಸಿದ 127 ಬಗೆಯ ಆಟಿ ತಿನಿಸುಗಳು: ಮಧ್ಯಾಹ್ನದ ಭೋಜನದ ವೇಳೆಗೆ ತುಳುನಾಡಿನ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ಬಿಂಬಿಸುವ ಬರೋಬ್ಬರಿ 127 ಬಗೆಯ ವೈವಿಧ್ಯಮಯ ಆಟಿ ತಿನಿಸುಗಳನ್ನು ಸಿದ್ಧಪಡಿಸಲಾಗಿತ್ತು. ಇದು ಕಾರ್ಯಕ್ರಮಕ್ಕೆ ಆಗಮಿಸಿದ ಸಾರ್ವಜನಿಕರು ಮತ್ತು ಕಾರ್ಯಕರ್ತರ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಮಂಡಲದ ಪ್ರಭಾರಿ ತಿಲಕ್ ರಾಜ್ ಕೃಷ್ಣಾಪುರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ನಂದನ್ ಮಲ್ಯ, ಮಂಡಲದ ಯುವ ಮೋರ್ಚಾ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಪ್ರಮುಖರಾದ ಸುಧೀರ್ ಶೆಟ್ಟಿ ಕಣ್ಣೂರು, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರಾಜ್ ಗೋಪಾಲ್ ರೈ, ಗುರು ಚರಣ್, ನಾರಾಯಣ ಗಟ್ಟಿ, ನಿಕಟ ಪೂರ್ವ ಪಾಲಿಕೆ ಸದಸ್ಯರು, ಪಕ್ಷದ ವಿವಿಧ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರ ಸಹಿತ ಅನೇಕರು ಉಪಸ್ಥಿತರಿದ್ದರು.
