ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಪ್ರಕೋಷ್ಠದ ಆರಂಭ ಮತ್ತು ಪ್ರಥಮ ಸಭೆಯು ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಯಶಸ್ವಿಯಾಗಿ ಜರುಗಿತು. ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಅವರ ದಿವ್ಯ ಮಾರ್ಗದರ್ಶನದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಶಿಕ್ಷಣ ಪ್ರಕೋಷ್ಠದ ನೂತನ ಜಿಲ್ಲಾ ಸಮಿತಿಯನ್ನು ಅಧಿಕೃತವಾಗಿ ಪ್ರಕಟಿಸಿ, ಪದಗ್ರಹಣ ನೆರವೇರಿಸಿದರು.

ಜಿಲ್ಲಾ ಸಂಚಾಲಕರಾಗಿ ವಸಂತ ಮಂಜನಾಡಿ ಹಾಗೂ ಸಹ ಸಂಚಾಲಕರಾಗಿ ನಾರಾಯಣ ಗೌಡ ಬಂಟ್ವಾಳ ನೇಮಕಗೊಂಡಿದ್ದಾರೆ. ಸಮಿತಿಯ ಸದಸ್ಯರಾಗಿ ಸುರೇಶ್ ಭಂಡಾರಿ (ಮೂಡಬಿದ್ರೆ), ವಿನೀತ್ ನಾಯರ್ (ಮಂಗಳೂರು ಉತ್ತರ), ಸತ್ಯನಾರಾಯಣ ಭಟ್ (ಮಂಗಳೂರು ಸೌತ್), ಸುರೇಶ್ ಎಂ. ಎಸ್. (ಬೆಳ್ತಂಗಡಿ), ಮನಮೋಹನ್ (ಸುಳ್ಯ), ರಾಜೇಂದ್ರ ಮಾಸ್ಟರ್ (ಪುತ್ತೂರು) ಆಯ್ಕೆಯಾಗಿದ್ದಾರೆ. ಹಾಗೆಯೇ, ಮಂಗಳೂರು ಸೌತ್ ಸಂಚಾಲಕರಾಗಿ ಏಕೆ ಬಾಬು ಮತ್ತು ಮಂಗಳೂರು ಮಂಡಲ ಸಂಚಾಲಕರಾಗಿ ವಸಂತ್ ರೈ ಬಿಕೆ ಅವರು ನೇಮಕಗೊಂಡಿದ್ದಾರೆ.

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಬಿಜೆಪಿ ಶಿಕ್ಷಣ ಸಹ ಸಂಚಾಲಕರು ಹಾಗೂ ‘ಬಿಜೆಪಿ ಸೇವಾಸಂಕಲ್ಪದ ಬದಲಾವಣೆಯ ಕಥೆ’ ಕಾರ್ಯಕ್ರಮದ ರಾಜ್ಯ ಸಹ ಉಸ್ತುವಾರಿಗಳಾದ ಎಂ. ಜಿ. ಭಟ್ ಕುಮಟಾ ಅವರು ಮಾತನಾಡಿ, “ಬದಲಾವಣೆಯ ಕಥೆ” ಕಾರ್ಯಕ್ರಮದ ಚಟುವಟಿಕೆಗಳಲ್ಲಿ ಪ್ರಕೋಷ್ಠದ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜೊತೆಗೆ ಸಮಿತಿಯ ಮುಂದಿನ ಕಾರ್ಯವೈಖರಿಯ ಬಗ್ಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಕೋಷ್ಠಗಳ ಸಂಯೋಜಕರಾದ ಸುಧೀರ್ ಶೆಟ್ಟಿ ಕಣ್ಣೂರು, ಕರ್ನಾಟಕ ರಾಜ್ಯ ಬಿಜೆಪಿ ಶಿಕ್ಷಣ ಪ್ರಕೋಷ್ಠದ ಸದಸ್ಯರು ಹಾಗೂ ಜಿಲ್ಲಾ ಶಿಕ್ಷಣ ಪ್ರಕೋಷ್ಠದ ಉಸ್ತುವಾರಿ ಮುರಳಿ ಹೊಸಮಜಲು ಉಪಸ್ಥಿತರಿದ್ದು ಸಲಹೆ-ಸೂಚನೆಗಳನ್ನು ನೀಡಿದರು. ನೂತನ ಜಿಲ್ಲಾ ಸಂಚಾಲಕ ವಸಂತಕುಮಾರ್ ಮಂಜನಾಡಿ ವಂದಿಸಿದರು.
