ಮಂಗಳೂರು,ಫೆ. 27: ಮಂಗಳೂರು ಧರ್ಮಪ್ರಾಂತ್ಯದ ಕ್ಯಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಸಹಯೋಗದೊಂದಿಗೆ ಬೈಬಲ್ ಸಮ್ಮೇಳನಕ್ಕೆ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ ಮೈದಾನದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಹಿರಿಯ ಗುರು ಮೊನ್ಸಿಂಜೊರ್ ವಂ| ಮ್ಯಾಕ್ಸಿಮ್ ಎಲ್. ನೊರೊನ್ಹಾ ಅವರು ಧ್ವಜಾರೋಹನ ಮಾಡುವ ಮೂಲಕ ಚಾಲನೆ ನೀಡಿ ಬಲಿಪೂಜೆ ನೆರವೇರಿಸಿದರು.

ಬಲಿಪೂಜೆಯಲ್ಲಿ “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲೆಸಿದೆ” ಎಂಬ ಕುರಿತು ಪ್ರವಚನ ನೀಡಿದ ಅವರು, ನಾವು ದೇವರ ಮುಂದೆ ಪ್ರಾರ್ಥನೆ ಮಾಡುವಾಗ ದೃಢ ವಿಶ್ವಾಸ ಹೊಂದಿರಬೇಕು. ಮಕ್ಕಳು ಕೇಳಿದಾಗ ತಂದೆ ಅದನ್ನು ನೀಡುತ್ತಾರೆ. ಆದರೆ, ದೇವರು ಅದಕ್ಕಿಂತ ಮಿಗಿಲಾದುದನ್ನೇ ನೀಡುತ್ತಾರೆ. ಪ್ರಾರ್ಥಿಸಿದ್ದು ಸಿಗದಿದ್ದಲ್ಲಿ ಯಾವುದೇ ಕಾರಣಕ್ಕೂ ಜೀವನದಲ್ಲಿ ನಿರಾಶೆಗೆ ಒಳಗಾಗಬಾರದು. ದೇವರ ಮೇಲೆ ವಿಶ್ವಾಸವಿಟ್ಟಲ್ಲಿ ದೇವರು ಅದಕ್ಕಿಂತಲೂ ಮಿಗಿಲಾದುದನ್ನು ನೀಡುತ್ತಾರೆ. ಕ್ರಿಸ್ತರ ವಾಕ್ಯದ ಮೇಲೆ ವಿಶ್ವಾಸ ಇರಿಸಬೇಕು. ಅದನ್ನು ಅರಿತುಕೊಳ್ಳಲು ಮುಂದಾಗಬೇಕು. ಅದಕ್ಕೆ ಬೈಬಲ್ ಸಮಾವೇಶ ನೆರವಾಗಲಿದೆ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡಾ| ಜೆ.ಬಿ. ಸಲ್ಡಾನ್ಹಾ, ರೋಯ್ ಕ್ಯಾಸ್ತಲಿನೊ, ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ನ ನಿರ್ದೇಶಕ ವಂ| ಕ್ಲಿಫರ್ಡ್ ಫೆರ್ನಾಂಡಿಸ್, ಸಂಯೋಜಕ ಡೋಲ್ಫಿ ಲೋಬೊ, ಬೈಬಲ್ ಆಯೋಗದ ಕಾರ್ಯದರ್ಶಿ ವಂ| ವಿನ್ಸೆಂಟ್ ಸಿಕ್ವೇರಾ, ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ ವಂ| ರೋಹಿತ್ ಡಿಕೋಸ್ತಾ, ವಂ| ಅನಿಲ್ ಐವನ್ ಫೆರನಾಂಡಿಸ್, ಎಲಿಯಾಸ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಬಲಿಪೂಜೆಯ ಬಳಿಕ ಜಪಮಾಲೆಯ ಧ್ಯಾನ, ಬೈಬಲ್‌ನ ಹಳೆ ಮತ್ತು ಹೊಸ ಒಡಂಬಡಿಕೆಯಿಂದ ”ತಮ್ಮ ಜನರೊಡನೆ ದೇವರ ಉಪಸ್ಥಿತಿ”ಯ ಕುರಿತು ಆಯ್ದ ವಿಷಯಗಳ ಮೇಲೆ ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವಚನಗಳು ನಡೆದವು. ದಿವ್ಯಸಂಸ್ಕಾರದ ಆರಾಧನೆ, ಸ್ತುತಿ-ಆರಾಧನೆ ಮತ್ತು ಗುಣಪಡಿಸುವ ಪ್ರಾರ್ಥನೆಗಳು ನಡೆದವು.