ಮಂಗಳೂರು: ಮಕ್ಕಳ ಹಕ್ಕುಗಳು ಎನ್ನುವುದು ಪ್ರಕೃತಿ ಮತ್ತು ಕಾನೂನು ಮಕ್ಕಳಿಗೆ ನೀಡಿರುವ ವಿಶೇಷ ಅಧಿಕಾರವಾಗಿದೆ. ಅದನ್ನು ಪೋಷಕರು, ಸಮಾಜ ಹಾಗೂ ಸರ್ಕಾರ ಜಂಟಿಯಾಗಿ ರಕ್ಷಿಸಿ ಪಾಲಿಸಬೇಕು ಎಂದು ಹವ್ಯಾಸಿ ಪತ್ರಕರ್ತ ಮತ್ತು ಹಿರಿಯ ಟಿವಿ ನಿರೂಪಕ ಪ್ರಕಾಶ್ ಪುತ್ತೂರು ತಿಳಿಸಿದರು.

ನಗರದ ಬೆಸೆಂಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಮಕ್ಕಳ ಹಕ್ಕುಗಳ ಮಾಹಿತಿ ಕಾರ್ಯಕ್ರಮ’ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಮಕ್ಕಳಿಗೆ ಬಾಲ್ಯದಲ್ಲೇ ಅವರ ಹಕ್ಕುಗಳನ್ನು ತಿಳಿಸಿ ರಕ್ಷಿಸುವ ಕಾರ್ಯ ಮತ್ತು ಅವರ ಕರ್ತವ್ಯವನ್ನು ಮನವರಿಕೆ ಮಾಡಿಕೊಡುವ ಜವಾಬ್ದಾರಿಗಳು ಮನೆಯಿಂದಲೇ ಪ್ರಾರಂಭವಾಗಬೇಕು. ವಿದ್ಯಾರ್ಥಿಗಳು ಕೇವಲ ಹಕ್ಕುಗಳಿಗೆ ಸೀಮಿತವಾಗದೆ, ತಮ್ಮ ಜವಾಬ್ದಾರಿಗಳನ್ನೂ ಅರಿತು ಉತ್ತಮ ಅಧ್ಯಯನ, ಸಮಾಜಮುಖಿ ಕಾರ್ಯ ಹಾಗೂ ದೇಶದ ಏಳಿಗೆಗೆ ಪೂರಕವಾದ ಕೊಡುಗೆಗಳನ್ನು ನೀಡಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ಪ್ರಮುಖ ಕಾಯ್ದೆಗಳ ಸವಿಸ್ತಾರ ಮಾಹಿತಿಯನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಸೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಾಯತ್ರಿ ಶೆಟ್ಟಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಹಿರಿಯ ಸಮಾಜ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಹರಿಣಿ ಜಯಶಂಕರ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.
