• Home  
  • ಕರಾವಳಿ ಉತ್ಸವ ಮೈದಾನದಲ್ಲಿ ‘ಬ್ಯಾರಿ ಸೌಹಾರ್ದ ಉತ್ಸವ 2025’
- DAKSHINA KANNADA - HOME - LATEST NEWS

ಕರಾವಳಿ ಉತ್ಸವ ಮೈದಾನದಲ್ಲಿ ‘ಬ್ಯಾರಿ ಸೌಹಾರ್ದ ಉತ್ಸವ 2025’

ಕರ್ನಾಟಕ ಬ್ಯಾರೀಸ್ ಸೋಶಿಯಲ್ ಎಂಡ್ ಕಲ್ಚರಲ್ ಫಾರಂ ಆಯೋಜಿಸುವ ‘ಸೌಹಾರ್ದ ಬ್ಯಾರಿ ಉತ್ಸವ – 2025’ ಸಂಘಟನಾ ಸಮಿತಿ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ‘ಬ್ಯಾರಿ ಸೌಹಾರ್ದ ಉತ್ಸವ’ವನ್ನು 2025 ರ ಎಪ್ರಿಲ್ 18, 19,20 ರಂದು ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬ್ಯಾರಿ ಜನಾಂಗದ ವೈಶಿಷ್ಟ್ಯತೆ, ಸಂಸ್ಕೃತಿ, ಸೌಹಾರ್ದತೆ, ಕೊಡುಗೆಗಳು, ಸಾಧನೆಗಳು, ಪರಂಪರೆಗಳನ್ನು ಪ್ರತಿಬಿಂಬಿಸುವ ಜೊತೆಗೆ ಯುವ ಜನಾಂಗಕ್ಕೆ ದಿಕ್ಸೂಚಿಯಾಗುವ ಹಾಗೂ ಬಹು ಭಾಷಾ ಸಂಸ್ಕೃತಿಗಳನ್ನು ಪ್ರಸ್ತುತಪಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ನಿವೃತ್ತ ಡಿಸಿಪಿ, ಫಾರಂ ಅಧ್ಯಕ್ಷ ಜಿಎ ಬಾವಾ ಹೇಳಿದ್ದಾರೆ. ಅವರು ಶುಕ್ರವಾರ ಮಂಗಳೂರು ನಗರದ ಹೊಟೇಲ್ ವುಡ್ ಲ್ಯಾಂಡ್ ಹಾಲ್ ನಲ್ಲಿ ಬೆಳಿಗ್ಗೆ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.


ಎಪ್ರಿಲ್ 18 ರ ಶುಕ್ರವಾರ ಸಾಯಂಕಾಲ 4 ಗಂಟೆಗೆ ಉದ್ಘಾಟನೆಗೊಂಡು ಉತ್ಸವವು ದಿನಾಂಕ 20-4-2025 ರಂದು 7 ಗಂಟೆಗೆ ಸಮಾರೋಪಗೊಳ್ಳಲಿದೆ. ಈ ಮೂರು ದಿನಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ ನಡೆಯಲಿದೆ.

ವಿವರ:
ದಿನಾಂಕ 19 -4-2025 ರಂದು ಬೆಳಿಗ್ಗೆ 10 ಗಂಟೆಯಿಂದ ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ, ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಒಂದೇ ಕಡೆ ದೇಶ ವಿದೇಶದ 100 ಕ್ಕಿಂತ ಹೆಚ್ಚು ಪ್ರಖ್ಯಾತ ಕಂಪೆನಿಗಳು ಇಲ್ಲಿ ಸೇರಲಿದ್ದು ಕರಾವಳಿ ಭಾಗ ಉದ್ಯೋಗ ಆಕಾಂಕ್ಷಿಗಳು ಇದರ ಸದುಪಯೋಗ ಪಡೆಯಬಹುದು. ದುಬೈ, ಸೌದಿ ಅರೇಬಿಯಾ, ಕತಾರ್ ಸೇರಿಂದ ಮಿಡಲ್ ಈಸ್ಟ್ ನ ಕಂಪೆನಿಗಳು ಇಲ್ಲಿನ ಯುವಕ — ಯುವತಿಯರಿಗೆ ಉದ್ಯೋಗ ಅವಕಾಶ ಕೊಡಲು ಈ ಮೇಳದಲ್ಲಿ ಭಾಗವಹಿಸಲಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತ ಆಗದೇ ಇಲ್ಲಿ ದಾಖಲು ಮಾಡಿದ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳನ್ನು ನಾವು ನಿರಂತರ ಸಂಪರ್ಕದಲ್ಲಿ ಇರಿಸಿ ಅವರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಾಡಲು ಅನುಕೂಲ ಆಗುವಂತೆ ಒಂದು ಜಾಬ್ ಪ್ಲೇಸ್ ಮೆಂಟ್ ಕಚೇರಿ ತೆರೆದಿದ್ದು ಅಲ್ಲಿ ನುರಿತ ಟ್ರೈನರ್ ಗಳು ಇವರಿಗೆ ಜಾಬ್ ಇಂಟರ್ವ್ಯೂ ತರಭೇತಿ ಮತ್ತು ಕೌಶಲ್ಯ ನೀಡಿ ಮುಂದೆಯೂ ಅವರಿಗೆ ಉದ್ಯೋಗ ಸಿಗುವಂತೆ ಮಾಡಲು ಅನುಕೂಲ ಮಾಡಿ ಕೊಡಲಿದೆ. ಈ ಸೇವೆ ನಿರಂತರ ಸಂಪೂರ್ಣ ಉಚಿತವಾಗಿ ನಡೆಯಲಿದೆ. ಈಗಾಗಲೇ ದುಬೈನಲ್ಲಿ ಬ್ಯಾರಿ ಮೇಳ ನಡೆಸಿದ ಆಯೋಜಕರು ಅಲ್ಲಿನ ನೂರಾರು ಕಂಪೆನಿಗಳ ನೆಟ್ ವರ್ಕ್ ಮಾಡಿದ್ದಾರೆ. ಅವರು ಈ ಮೇಳದಲ್ಲಿ ರಿಜಿಸ್ಟರ್ ಆಗುವ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಸಕ್ಕೆ ಸಹಾಯ ಮಾಡಲಿದ್ದಾರೆ.

20-4-2025 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ. ಈಗಾಗಲೇ ಕರಾವಳಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ ಪುತ್ತೂರು ಕಮ್ಯೂನಿಟಿ ಸೆಂಟರ್ ನ 100 ಕ್ಕಿಂತ ಹೆಚ್ಚು ಅನುಭವಿ ಕೌನ್ಸಿಲರ್ ಗಳು, ಮೆನ್ಟರ್ಸ್ ಗಳು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಒನ್ ಟು ವನ್ ಕೌನ್ಸಿಲಿಂಗ್ ಮಾಡಲಿದ್ದಾರೆ.  ಇದರಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಕಾಲೇಜು ಮತ್ತು ಜಾಗತಿಕ ಉದ್ಯೋಗ ಬೇಡಿಕೆ ಇರುವ ಕೋರ್ಸ್ ಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನ ಮತ್ತು ಕೌನ್ಸಿಲಿಂಗ್ ಗಳ ದಾಖಲೆ ಹಾಗೂ ನೋಂದಾವಣಿ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸರಕಾರಿ ಮತ್ತು ಪ್ರೈವೇಟ್ ವಿದ್ಯಾರ್ಥಿ ವೇತನ ಮಾಹಿತಿ ನೀಡಲಿದ್ದೇವೆ. ವಿಶೇಷವಾಗಿ 85 % ಹೆಚ್ಚು ಅಂಕ ಪಡೆದು ದ್ವಿತೀಯ ಪಿಯುಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪ್ರೋತ್ಸಾಹ ಸಿಗಲಿದೆ.

ಅದೇ ದಿನ 11 ಗಂಟೆಗೆ ಉದ್ಯಮ ಮೇಳ ನಡೆಯಲಿದ್ದು ಇದರಲ್ಲಿ ಸಣ್ಣ ಹಾಗೂ ದೊಡ್ಡ ಉದ್ಯಮಗಳಿಗೆ ಉದ್ಯಮದ ಪ್ರಗತಿಯ ಹಾದಿಯಲ್ಲಿ ನಿರ್ವಹಿಸಬೇಕಾದ ಕ್ರಮ, ನೀತಿ ಮತ್ತು ಸ್ಟ್ರಾಟಜಿ ಗಳ ಬಗ್ಗೆ, ಹೂಡಿಕೆ, ಬೇಡಿಕೆ ಮತ್ತು ಹೊಸ ಆಲೋಚನೆಯ ಪ್ರೋತ್ಸಾಹ ವಾತಾವರಣ ನಿರ್ಮಿಸಲಿದ್ದೇವೆ.

ಅದೇ ದಿನ 20 ರಂದು ಉಚಿತ ವೈದ್ಯಕೀಯ ಶಿಬಿರ ತಪಾಸಣಾ ಶಿಬಿರ ನಡೆಯಲಿದ್ದು, ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮವನ್ನು ವೃತ್ತಿಪರ ಉತ್ಸಾಹಿ ಯುವಕರು ಸಂಘಟಿಸಿದ್ದಾರೆ. ಆದಷ್ಟು ಹೆಚ್ಚು ಜನರು ಇದರ ಪ್ರಯೋಜನ ಪಡೆಯಬೇಕು. ಎಲ್ಲಾ ಧರ್ಮೀಯ ಯುವಕರು – ಯುವತಿಯರು, ಹಿರಿಯರು ಮತ್ತು ಕಿರಿಯರು ಇದರ ಸದುಪಯೋಗ ಪಡೆದು ನಾಡಿನ ಸೌಹಾರ್ದತೆ ಮತ್ತು ಅಭಿವೃದ್ಧಿಯಲ್ಲಿ ಪಾಲು ಸೇರಬೇಕು ಎಂದು ವಿನಂತಿಸುತ್ತೇವೆ.

ಸುದ್ದಿಗೋಷ್ಟಿಯಲ್ಲಿ ಇಕ್ಬಾಲ್ ಪರ್ಲಿಯಾ, ಸಂಸ್ಥಾಪಕ, ಸುಹೈಲ್, ಉಪಕುಲಪತಿ, ಪ್ರೆಸಿಡೆನ್ಸಿ ವಿವಿ ಬೆಂಗಳೂರು, ಪ್ರದೀಪ್ ಡಿಸೋಜಾ, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ, ಅರುಣ್, ಉದ್ಯೋಗ ಮೇಳದ ಉಸ್ತುವಾರಿ, ಯುಟಿ ಫರ್ಝನಾ ಅಶ್ರಫ್, ಕೆಪಿಸಿಸಿ ವಕ್ತಾರೆ, ಮೂಸಬ್ಬ, ಮೀಫ್ ಅಧ್ಯಕ್ಷ, ಶಾಹುಲ್ ಹಮೀದ್ ಕೆ.ಕೆ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ,  ಷರೀಫ್ ಅಬ್ಬಾಸ್ ವಳಾಲು, ಸಂಘಟಕರು ಹಾಜರಿದ್ದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678