DAKSHINA KANNADAHOMELATEST NEWS

ನೇತ್ರಾವತಿಯ ನೀರಿನ ಮಟ್ಟ ದಿಢೀರ್‌ ಏರಿಕೆ: ಅಜಿಲಮೊಗರು, ಕೋಟೆಕಣಿ ಜಲಾವೃತ- ಹಲವರ ಸ್ಥಳಾಂತರ

ಬಂಟ್ವಾಳ: ಇಂದು ಮುಂಜಾನೆಯಿಂದಲೇ ಸುರಿಯುತ್ತಿರುವ ಎಡಬಿಡದ ಮಳೆಗೆ ನೇತ್ರಾವತಿ ನದಿಯ ನೀರಿನ ಮಟ್ಟ ಸಂಜೆಯ ವೇಳೆ ಏಕಾಏಕಿ ಏರಿಕೆ ಕಂಡಿದ್ದು, ಸುಮಾರು 15 ಕುಟುಂಬಗಳು ಅಪಾಯದಲ್ಲಿದ್ದು, ಅವರ ಸ್ಥಳಾಂತರಕ್ಕೆ ಸೂಚಿಸಲಾಗಿದೆ.

ಬಂಟ್ವಾಳ ಸಮೀಪದ ಪಾಣೆಮಂಗಳೂರಿನ ಆಲಡ್ಕದಲ್ಲಿ ಸುಮಾರು 15 ಕುಟುಂಬಗಳು ಅಪಾಯದಲ್ಲಿದ್ದು, ಅವರ ಸ್ಥಳಾಂತರಕ್ಕೆ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸಂಜೆಯ ವೇಳೆಗಾಗಲೇ 10 ಮನೆಗಳ ಮೆಟ್ಟಿಲಿನವರೆಗೆ ನೀರು ತಲುಪಿದ್ದು, ಮುಂಜಾಗ್ರತಾ ಕ್ರಮವಾಗಿ 15 ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಇದರ ಜೊತೆಗೆ ತಗ್ಗುಪ್ರದೇಶಗಳಾದ ಕಂಚಿಕಾರ್ ಪೇಟೆ, ಬಸ್ತಿಪಡ್ಪು, ಜಕ್ರಿಬೆಟ್ಟು, ನಾವೂರ, ನಂದಾವರ ಸಹಿತ ಅನೇಕ ಕಡೆಗಳಲ್ಲಿ ನೀರು ತುಂಬಿ ಜಲಾವೃತವಾಗುತ್ತಲಿದ್ದು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ತಾಲೂಕು ಆಡಳಿತವು ಪರಿಸ್ಥಿತಿಯನ್ನು ನಿರಂತರವಾಗಿ ಅವಲೋಕಿಸುತ್ತಿದ್ದು, ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಸಂಭಾವ್ಯ ನೆರೆ ಪರಿಸ್ಥಿತಿಯನ್ನು ಎದುರಿಸಲು ಎಸ್.ವಿ.ಎಸ್. ಶಾಲೆ ಹಾಗೂ ಪಾಣೆಮಂಗಳೂರು ಶಾರದಾ ಹೈಸ್ಕೂಲ್‌ನಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ತಗ್ಗು ಪ್ರದೇಶಗಳು ಜಲಾವೃತ

ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕೆಯಿಂದ ಆಲಡ್ಕ ಪೇಟೆ, ಅಜಿಲಮೊಗರು ಮಸೀದಿ ಆವರಣ, ಬಂಟ್ವಾಳ ಕೋಟೆಕಣಿ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಸ್ಥಳೀಯ ಆಡಳಿತ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದು, ಸಾರ್ವಜನಿಕರು ಅನಗತ್ಯವಾಗಿ ನೀರಿನ ಪ್ರದೇಶಗಳಿಗೆ ತೆರಳದಂತೆ ಹಾಗೂ ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

Share News