Site icon canaratvnews

ಯುವತಿ ಮರ್ಡರ್‌ ಕೇಸ್‌: ಇಲಿ ಪಾಷಾಣ ಸೇವಿಸಿದ ಸ್ಥಿತಿಯಲ್ಲಿ ಆರೋಪಿ ಬಂಧನ

ಬಂಟ್ವಾಳ: ಬಿ.ಸಿ.ರೋಡಿನ KSRTC ಬಸ್ ನಿಲ್ದಾಣದ ಬಳಿ ಲಾವಣ್ಯ ಎಂಬ ಯುವತಿಯನ್ನು ಮಾರಕಾಸ್ತ್ರದಿಂದ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ಚೇತನ್‌ನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತ ಇಲಿಪಾಷಾಣ ಸೇವಿಸಿದ್ದ ಎಂದು ತಿಳಿದು ಬಂದಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ದ.ಕ ಎಸ್ಪಿ

ಘಟನೆ ನಡೆದ ತಕ್ಷಣ ಬಂಟ್ವಾಳ ಪೊಲೀಸರು ಸಿಸಿಬಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಇಂದು ಬೆಳಗ್ಗೆ ಮಂಗಳೂರು ಹೊರವಲಯದ ಪಚ್ಚನಾಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಕಕ್ಯಪದವು ನಿವಾಸಿ ಲಾವಣ್ಯ (21) ಎಂಬಾಕೆಯನ್ನು ಗುರುವಾರ ಸಂಜೆ ಬೆಳ್ತಂಗಡಿ ತಾಲೂಕಿನ ಓಡಿಲ್ನಾಲ ನಿವಾಸಿ ಚೇತನ್‌ ಬಿಸಿರೋಡಿನ KSRTC ಬಸ್ ನಿಲ್ದಾಣದ ಬಳಿ ಮಾರಕಾಸ್ತ್ರದಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆಯ ಬಳಿಕ ದಕ್ಷಿಣ ಕನ್ನಡ ಎಸ್‌ಪಿ ಅವರು ಆರೋಪಿಯ ಬಂಧನಕ್ಕಾಗಿ 3 ವಿಶೇಷ ತಂಡಗಳ ಮೂಲಕ ಕಾರ್ಯಾಚರಣೆ ಆರಂಭಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ಬಂಟ್ವಾಳ ಮತ್ತು ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಹುಡುಗಿಯ ತಂದೆಗೆ ಕರೆ ಮಾಡಿ “ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ ಎಂದಿದ್ದ”

ಕೃತ್ಯ ಎಸಗಿದ ನಂತರ ಆರೋಪಿ ಚೇತನ್ ತನ್ನ ಆಲ್ಟೋ ಕಾರಿನಲ್ಲಿ ಮಂಗಳೂರಿನ ಕಡೆಗೆ ಪರಾರಿಯಾಗಿದ್ದಾನೆ. ಈ ಮಧ್ಯೆ ಆತ ಲಾವಣ್ಯ ತಂದೆಗೆ ಕರೆ ಮಾಡಿ, “ನಾನು ನಿಮ್ಮ ಮಗಳನ್ನು ಕೊಂದಿದ್ದೇನೆ, ಈಗ ನಾನೂ ಸಹ ಜೀವನ ಕೊನೆಗೊಳಿಸಿಕೊಳ್ಳುತ್ತೇನೆ” ಎಂದು ಹೇಳಿದ್ದ ಎನ್ನಲಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಲರ್ಟ್ ಆದ ಬಂಟ್ವಾಳ ಉಪವಿಭಾಗದ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದರು. ಮೊಬೈಲ್ ನೆಟ್‌ವರ್ಕ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ವಾಮಂಜೂರು ಪಚ್ಚನಾಡಿ ಬಳಿ ಆರೋಪಿಯನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ.

Share News
Exit mobile version