LATEST NEWS

ಬಂದರ್ ಫ್ರೆಂಡ್ಸ್ ಹಾಗೂ ಯೆನೆಪೋಯ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಯಶಸ್ವಿ ರಕ್ತದಾನ ಶಿಬಿರ

ಮಂಗಳೂರು: ನಗರದ ಬಂದರ್ ಫ್ರೆಂಡ್ಸ್ (ರಿ) ಸಂಸ್ಥೆಯ ಆಶ್ರಯದಲ್ಲಿ, ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ಕೊಡಿಯಾಲ್ ಬೈಲ್ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವುಗಳ ಜಂಟಿ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಬಂದರ್‌ನ ಝೀನತ್ ಭಕ್ಸ್ ಯತೀಮ್ ಖಾನ ಸಭಾಂಗಣದಲ್ಲಿ ನಡೆದ ಈ ಶಿಬಿರದಲ್ಲಿ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಒಟ್ಟು 175 ಯೂನಿಟ್ ರಕ್ತ ಸಂಗ್ರಹವಾಗಿದೆ.

ಬಂದರ್ ಬೂಬುಕ ಜುಮ್ಮಾ ಮಸೀದಿಯ ಖತೀಬ್ ಹಾಜಿ ಸಿರಾಜುದ್ದೀನ್ ಫೈಝಿ ಅವರ ದುವಾ (ಪ್ರಾರ್ಥನೆ) ಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಕ್ತದಾನ ಜೀವದಾನ: ಕೆ. ಅಶ್ರಫ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಮೇಯರ್ ಕೆ. ಅಶ್ರಫ್, “ರಕ್ತದಾನ ಎನ್ನುವುದು ಮತ್ತೊಬ್ಬರ ಅಮೂಲ್ಯ ಜೀವವನ್ನು ಉಳಿಸುವ ಶ್ರೇಷ್ಠ ಸಮಾಜಮುಖಿ ಕಾರ್ಯವಾಗಿದೆ. ಇಂದು ಹಲವು ಸಂಘಟನೆಗಳು ಇಂತಹ ಶಿಬಿರಗಳನ್ನು ಆಯೋಜಿಸುತ್ತಿರುವುದು ಸಮಾಜಕ್ಕೆ ಹೆಮ್ಮೆಯ ವಿಷಯ. ಬಂದರ್ ಫ್ರೆಂಡ್ಸ್ ಸಂಘಟನೆಯು ಸದಾ ಇಂತಹ ಜನಪರ ಹಾಗೂ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವುದು ನಿಜಕ್ಕೂ ಶ್ಲಾಘನೀಯ” ಎಂದು ಬಣ್ಣಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ: ಐವನ್ ಡಿಸೋಜ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ ಮಾತನಾಡಿ, ಬಂದರ್ ಫ್ರೆಂಡ್ಸ್ ಸಂಘಟನೆಯ ನಿರಂತರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಈ ಸಂಸ್ಥೆಗೆ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ದೊರೆಯುವಂತಾಗಲಿ ಎಂದು ಅವರು ಶುಭ ಹಾರೈಸಿದರು.

ಮೂಡ ಅಧ್ಯಕ್ಷರಿಗೆ ಸನ್ಮಾನ

ಇದೇ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡ) ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ಬಂದರ್ ಫ್ರೆಂಡ್ಸ್ ಸಂಘಟನೆಯ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಯೆನೆಪೋಯ ಗ್ರೂಪ್ ನಿರ್ದೇಶಕ ಯೆನೆಪೋಯ ಅಬ್ದುಲ್ಲಾ ಜಾವೇದ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಉದ್ಯಮಿಗಳಾದ ಹಾಜಿ ಶರೀಫ್ ಬೋಳಾರ್, ಹಾಜಿ ಮನ್ಸೂರ್ ಅಹ್ಮದ್ ಆಝಾದ್, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶಂಶುದ್ದೀನ್ ಕಂಡತ್ಪಳ್ಳಿ, ಕಂಡತ್ಪಳ್ಳಿ ಜುಮ್ಮಾ ಮಸೀದಿ ಖತೀಬ್ ರಫೀಕ್ ಮದನಿ, ಇಮ್ರಾನ್ ಹಸನ್, ವಹಾಬ್ ಕುದ್ರೋಳಿ, ಮಾಝಿನ್ ಅಲ್ ಜುಬೈಲ್, ಅಬ್ದುಲ್ ಲತೀಫ್ ಕಂದಕ್, ಮಾಜಿ ಕಾರ್ಪೊರೇಟರ್ ಹಾಜಿ ಶಂಶುದ್ದೀನ್ ಎಚ್.ಬಿ.ಟಿ, ಕೆ.ಇ. ರಶೀದ್, ಎಂ.ಎ. ಅಶ್ರಫ್, ಹಾಜಿ ಎಂ. ತೌಫೀಕ್, ಮೊಹಮ್ಮದ್ ಅಲಿ ಲಿಬರ್ಟಿ, ಫಾಹಿಮ್ ಅಕ್ತರ್ ಅಲ್ ಜುಬೈಲ್, ಜಾವೇದ್ ಹಸನ್ ದುಬೈ, ಫರ್ವೇಜ್ ಬಂದರ್ ಹಾಗೂ ಯೆನೆಪೋಯ ಆಸ್ಪತ್ರೆಯ ವೈಶಾಕ್, ದಯಾನಂದ್, ಅಜಯ್, ಡಾ. ಗ್ಲೋರಿಯಾ ಮತ್ತು ಇಮ್ರಾನ್ ಎ.ಆರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಬಂದರ್ ಫ್ರೆಂಡ್ಸ್ ಅಧ್ಯಕ್ಷರಾದ ಎಂ.ಕೆ. ಫಯಾಝ್, ಗೌರವಾಧ್ಯಕ್ಷರಾದ ಶಿಹಾಬ್ ಎ.ಆರ್., ಕೋಶಾಧಿಕಾರಿ ಅಬ್ದುಲ್ ಸತ್ತಾರ್ ಹಾಗೂ ಸಂಘಟನೆಯ ಸರ್ವ ಸದಸ್ಯರು ಶಿಬಿರದ ಯಶಸ್ಸಿಗೆ ಶ್ರಮಿಸಿದರು. ಶಾರಿಕ್ ಕುದ್ರೋಳಿ ಕಾರ್ಯಕ್ರಮವನ್ನು ಸ್ವಾಗತಿಸಿದರು. ಒಟ್ಟಾರೆಯಾಗಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದ ಈ ಶಿಬಿರವು ಅತ್ಯಂತ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

Share News