canaratvnews

ಕಸ ವಿಂಗಡಣೆ ಪ್ರತಿ ನಾಗರಿಕನ ಜವಾಬ್ದಾರಿ: ಬಜಾಲ್‌ನಲ್ಲಿ ಸ್ವಚ್ಛತಾ ಜಾಗೃತಿ ಜಾಥಾ ಉದ್ಘಾಟಿಸಿ ಅಬ್ದುಲ್ ರವೂಫ್ ಕರೆ

ಮಂಗಳೂರು: ಸ್ವಚ್ಛ ಪರಿಸರ ನಿರ್ಮಾಣವು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಂದು ಮನೆಯಲ್ಲೂ ಹಸಿಕಸ ಮತ್ತು ಒಣಕಸವನ್ನು ಸಮರ್ಪಕವಾಗಿ ವಿಂಗಡಿಸಿ ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವ ಮೂಲಕ ಸ್ವಚ್ಛ ನಗರ ನಿರ್ಮಾಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರು ಹಾಗೂ ಬದ್ರಿ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರವೂಫ್ ಕರೆ ನೀಡಿದ್ದಾರೆ.

ಅವರು ಬಜಾಲ್ ನಂತೂರಿನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಬಜಾಲ್ ನಂತೂರ್ ಫೈಸಲ್ ನಗರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಸ್ವಚ್ಛತಾ ಹಿ ಸೇವಾ’ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿದ್ಯಾರ್ಥಿಗಳಿಂದ ಘೋಷಣೆ, ಜಾಗೃತಿ:ಜಾಥಾದಲ್ಲಿ ಪಾಲ್ಗೊಂಡಿದ್ದ ಶಾಲಾ ನೂರಾರು ವಿದ್ಯಾರ್ಥಿಗಳು ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಪ್ರಮುಖ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿನಿ ರಿನಾಝ ಪರಿಸರ ಸಂರಕ್ಷಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಅಶ್ರಫ್ ಕೆ.ಇ., ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಎ.ಎನ್ ಅಬ್ಬಾಸ್, ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ನಿಕಟಪೂರ್ವ ಕಾರ್ಯದರ್ಶಿ ಅಶ್ರಫ್ ತೋಟ ಹಾಗೂ ಶಾಲೆಯ ಶಿಕ್ಷಕ-ಶಿಕ್ಷಕೇತರ ವೃಂದದವರು ಮತ್ತು ಪೋಷಕರು ಉಪಸ್ಥಿತರಿದ್ದರು.

Share News
Exit mobile version