ಮಂಗಳೂರು: ರೋಹನ್ ಕಾರ್ಪೊರೇಶನ್ ಆಯೋಜಿಸಿದ್ದ “ಆನ್ ಈವ್ನಿಂಗ್ ವಿತ್ ಶಾರುಖ್ ಖಾನ್” ಎಂಬ ವಿಶೇಷ ಕಾರ್ಯಕ್ರಮ ಅದ್ದೂರಿಯಾಗಿ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಗುರುವಾರ ಸಂಜೆ ನಡೆಯಿತು.

ಈ ಸಮಾರಂಭದಲ್ಲಿ ರೋಹನ್ ಕಾರ್ಪೊರೇಶನ್ ಐಷಾರಾಮಿ ಸಮುದ್ರತೀರ ವಸತಿ ಯೋಜನೆಯಾದ “ರೋಹನ್ ಮರೀನಾ ವನ್’ ಅನ್ನು ನಟ ಶಾರುಖ್ ಅನಾವರಣಗೊಳಿಸಿದರು. ನಂತರ ಮಾತನಾಡಿ ಮಂಗಳೂರು ನಗರದ ಆತಿಥ್ಯ, ಸಂಸ್ಕೃತಿ ಹಾಗೂ ವೇಗವಾಗಿ ಬೆಳೆಯುತ್ತಿರುವ ಅಭಿವೃದ್ಧಿಯನ್ನು ಶ್ಲಾಘಿಸಿದರು. ಜೊತೆಗೆ ರೋಹನ್ ಮರಿನಾ ಒನ್ ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡಿದ್ದು, ಎಲ್ಲಾ ಸೌಕರ್ಯಗಳೊಂದಿಗೆ ಆಕರ್ಷಕವಾಗಿದೆ ಎಂದು ಹೇಳಿದರು.
ತುಳುವಿನಲ್ಲೇ ‘ನಮಸ್ಕಾರ ಕುಡ್ಲ, ಎಂಚ ಉಲ್ಲಾರ್ ಎಂದು ಮಾತು ಆರಂಭಿಸಿದ ಬಾಲಿವುಡ್ ಬಾದ್ ಷಾ. ನಾನು ನನ್ನ ಬಾಲ್ಯವನ್ನು ಮಂಗಳೂರಿನಲ್ಲಿಯೇ ಕಳೆದಿದ್ದೇನೆ ಎನ್ನುವುದಕ್ಕೆ ಸಂತೋಷವಾಗುತ್ತಿದೆ ಎಂದ ಅವರು ಮಂಗಳೂರಿನಲ್ಲಿ ತಮ್ಮ ಬಾಲ್ಯದಲ್ಲಿ ತೆಗೆದ ಫೋಟೋ ತೋರಿಸಿ ಖುಷಿ ಹಂಚಿಕೊಂಡರು. ಇದರ ಜೊತೆಗೆ ನನಗೆ ಮಂಗಳೂರಿನ ನೀರುದೋಸೆ ತುಂಬಾ ಇಷ್ಟ ಎಂದ ಅವರು ಮುಂದೆಯೂ ಮಂಗಳೂರಿಗೆ ಬರುತ್ತೇನೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರೋಹನ್ ಕಾರ್ಪೊರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೇರೊ ‘ಶಾರುಖ್ ಖಾನ್ ಅವರ ಜೀವನ ಪಯಣವು ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲವಾಗಿದೆ ಎಂದು ಹೇಳಿದರು. ಕನಸು ಕಾಣುವ ಧೈರ್ಯ, ನಿರಂತರ ಪರಿಶ್ರಮ ಮತ್ತು ಸಾಧನೆಯತ್ತ ಇರುವ ಬದ್ಧತೆಯೇ ಯಶಸ್ಸಿನ ನಿಜವಾದ ಮಾರ್ಗ’ ಎಂಬ ಸಂದೇಶವನ್ನು ಅವರು ಹಂಚಿಕೊಂಡರು.
ರೋಹನ್ ಕಾರ್ಪೊರೇಷನ್ ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೇರೊ ಮಾತನಾಡಿ ‘ಮಂಗಳೂರಿನ ಜನತೆಗೆ ವಿಶ್ವಮಟ್ಟದ ಅನುಭವವನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೇಳಿದರು. ನಗರದ ಜನರಿಂದ ದೊರೆತ ಅಭೂತಪೂರ್ವ ಸ್ಪಂದನೆ ಕಾರ್ಯಕ್ರಮವನ್ನು ಸಂಸ್ಥೆಯ ಪಯಣದ ಅತ್ಯಂತ ಸ್ಮರಣೀಯ ಘಟ್ಟವನ್ನಾಗಿ ರೂಪಿಸಿದೆ’ ಎಂದರು.
ನಂತರ ನಡೆದ ವಿಶೇಷ ಸಂವಾದದಲ್ಲಿ ಶಾರುಖ್ ಖಾನ್, ಡಾ. ರೋಹನ್ ಮೊಂತೇರೊ ಹಾಗೂ ಡಿಯೋನ್ ಮೊಂತೇರೊ ಅವರು ಮಹತ್ವಾಕಾಂಕ್ಷೆ, ನಾಯಕತ್ವ, ಉದ್ಯಮಶೀಲತೆ, ಪರಿಶ್ರಮ ಮತ್ತು ಯಶಸ್ಸಿನ ಪಯಣದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು, ಉದ್ಯಮ ವಲಯದ ಗಣ್ಯರು, ಪ್ರತಿನಿಧಿಗಳು, ವಿಶೇಷ ಆಹ್ವಾನಿತರು ಸೇರಿ ಹಲವು ಮಂದಿ ಭಾಗವಹಿಸಿದ್ದರು. ಸಾಹಿಲ್ ಜಹೀರ್ ಹಾಗೂ ಅರ್‌ಜೆ ಡೋನಾ ಅವರು ನಿರೂಪಿಸಿದರು.
ಸಲ್ಮಾನ್ ಅಲಿ ಸಂಗೀತಕ್ಕೆ ಹುಚ್ಚೆದು ಕುಣಿದ ಪ್ರೇಕ್ಷಕರು
ಕಾರ್ಯಕ್ರಮದಲ್ಲಿ ಇಂಡಿಯನ್ ಐಡಲ್ ಖ್ಯಾತಿಯ ಗಾಯಕ ಸಲ್ಮಾನ್ ಅಲಿ ಅವರ ಗಾಯನಕ್ಕೆ ಯುವಕ-ಯುವತಿಯರು ಸೇರಿದಂತೆ ಹಲವರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಕಿಂಗ್ ಖಾನ್
ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಬ್ಬರ ಪ್ರಶ್ನೆಗೆ ಶಾರೂಖ್ ಖಾನ್ ಉತ್ತರಿಸಿದ್ದು, ವಿಶೇಷವಾಗಿತ್ತು. ಲೇಖಕ ಹಾಗೂ ಕವಿ ಟೈಟಸ್ ನೊರೊನ್ಹಾ ಅವರು ‘ನೀವು ನಟ ಆಗಿರದೇ ಇದ್ದರೆ ಮಂಗಳೂರಿನಲ್ಲೇ ಬೆಳೆದ ಯುವಕನಾಗಿದ್ದರೆ ಏನಾಗುತ್ತಿದ್ದಿರೀ ಎಂಬ ಪ್ರಶ್ನೆಗೆ ಉತ್ತರಿಸಿ “ನಾನು ನಟನಾಗದೇ ಇದ್ದರೆ ಮಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿರುತ್ತಿದ್ದೆ” ಎಂದು ಉತ್ತರಿಸಿ, ಮಂಗಳೂರಿನ ಹಲವು ಶಾಲಾ-ಕಾಲೇಜುಗಳ ಹೆಸರನ್ನು ಹೇಳಿ ಪ್ರೇಕ್ಷಕರನ್ನು ಹುಬ್ಬೇರಿಸುವಂತೆ ಮಾಡಿದರು. ಯುವತಿಯ ಪ್ರಶ್ನೆಯೊಂದಕ್ಕೆ ಉತ್ತರಿಸಿ “ಗೆಲುವಿಗೆ ಕಠಿಣ ಪ್ರಯತ್ನವೊಂದೇ ಮಾರ್ಗ ಎಂದು ಸಲಹೆ ನೀಡಿದರು.