canaratvnews

ಸಮಾಜದ ಧ್ವನಿಯಾಗಿ ‘ಅಮೃತ ಪ್ರಕಾಶ’ ನಿರಂತರ ಸೇವೆ ಸಲ್ಲಿಸಿದೆ: ಆನಂದ ಶೆಟ್ಟಿ ಅಡ್ಯಾರ್

ಮಂಗಳೂರು ಜುಲೈ 21: “ಯಾವುದೇ ಪತ್ರಿಕೆ ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮವಲ್ಲ. ಅದು ಸಮಾಜದ ಧ್ವನಿ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯಾಗಿದೆ,” ಎಂದು ಕಾವೂರು ಬಂಟರ ಸಂಘದ ಅಧ್ಯಕ್ಷರಾದ ಆನಂದ ಶೆಟ್ಟಿ ಅಡ್ಯಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ‘ಅಮೃತ ಪ್ರಕಾಶ’ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಮತ್ತು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ 13 ವರ್ಷಗಳಿಂದ ಅಮೃತ ಪ್ರಕಾಶ ಪತ್ರಿಕೆಯು ಸಮಾಜಮುಖಿ ವಿಚಾರಗಳು, ಮಹಿಳಾ ಸಬಲೀಕರಣ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರೇಷ್ಠ ಸೇವೆ ಸಲ್ಲಿಸಿದೆ ಎಂದು ಅವರು ಶ್ಲಾಘಿಸಿದರು.ವಿಶೇಷ ಸಂಚಿಕೆ ಬಿಡುಗಡೆ: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರು ಹಾಗೂ ಧರ್ಮದರ್ಶಿಗಳಾದ ಡಾ. ಹರಿಕೃಷ್ಣ ಪುನರೂರು ಅವರು ಅಮೃತ ಪ್ರಕಾಶ ಪತ್ರಿಕೆಯ ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, “ಸುದೀರ್ಘ 13 ವರ್ಷಗಳಿಂದ ಗುಣಮಟ್ಟದ ಹಾಗೂ ಮೌಲ್ಯಯುತ ಪತ್ರಿಕೆಯನ್ನು ಸಮಾಜಕ್ಕೆ ನೀಡುತ್ತಾ, ನಿರಂತರ ಸಾಹಿತ್ಯ ಸೇವೆ ಮಾಡುತ್ತಿರುವ ಡಾ. ಮಾಲತಿ ಶೆಟ್ಟಿ ಮಾಣೂರು ಅವರ ಕೆಲಸ ಶ್ಲಾಘನೀಯ,” ಎಂದು ಹೇಳಿ ಪತ್ರಿಕೆಯ ಬೆಳವಣಿಗೆಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಮಾಜ ಸೇವಕಿ ಹಾಗೂ ಉದ್ಯಮಿ ಲಯನ್ ಆಶಾ ರಾವ್ ಆರೂರು ಉಪಸ್ಥಿತರಿದ್ದರು.ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರು ಎಲ್ಲರನ್ನೂ ಸ್ವಾಗತಿಸಿದರು. ಲೇಖಕಿ ಹಾಗೂ ಶಿಕ್ಷಕಿ ಸುರೇಖಾ ಯಾಳವಾರ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.

Share News
Exit mobile version