ನವದೆಹಲಿ: ಎಐಸಿಸಿ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರು ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಇಂದು ಉಪರಾಷ್ಟ್ರಪತಿ ಕಚೇರಿಯಲ್ಲಿ ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದರು.

ದೇಶದ ಸಂಸದೀಯ ರಾಜಕಾರಣದಲ್ಲಿ ದೀರ್ಘ ಅನುಭವ ಹೊಂದಿರುವ ಖರ್ಗೆ ಅವರ ಈ ನೂತನ ರಾಜಕೀಯ ಹೆಜ್ಜೆಗೆ ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಹಿರಿಯ ನಾಯಕರು ಸಾಕ್ಷಿಯಾದರು.
ಅತ್ಯಂತ ವ್ಯವಸ್ಥಿತವಾಗಿ ನಡೆದ ಈ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉಪಸ್ಥಿತರಿದ್ದು ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರ ಧರ್ಮಪತ್ನಿ ರಾಧಾ ಬಾಯಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕುಟುಂಬದ ಪರವಾಗಿ ಸಂತಸ ಹಂಚಿಕೊಂಡರು.
ಕರ್ನಾಟಕದ ಮಟ್ಟಿಗೆ ಈ ಸಮಾರಂಭವು ವಿಶೇಷ ಗಮನ ಸೆಳೆಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಅವರು ಸಮಾರಂಭದಲ್ಲಿ ಪಾಲ್ಗೊಂಡು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರ್ನಾಟಕ ಕಾಂಗ್ರೆಸ್ ಪರವಾಗಿ ಆತ್ಮೀಯವಾಗಿ ಶುಭ ಹಾರೈಸಿದರು.