ಮಂಗಳೂರು. ಜ.12 : ಅಭಯ ಫ್ರೆಂಡ್ಸ್ ಟ್ರಸ್ಟ್ನ ಉದ್ಘಾಟನಾ ಸಮಾರಂಭವನ್ನು ರವಿವಾರದಂದು ಹಮ್ಮಿಕೊಳ್ಳಲಾಗಿತ್ತು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ, ಮಹಾದಾನಿ ಮತ್ತು ಸಮಾಜಸೇವಕ ಶ್ರೀಯುತ ಮೈಕಲ್ ಡಿ. ಸೋಜಾರವರು, ಅಭಯ ಫ್ರೆಂಡ್ಸ್ ಟ್ರಸ್ಟನ್ನು ಉದ್ಘಾಟಿಸಿದರು.

ನಂತರ ಮಾತನಾಡಿದವರು ಮಂಗಳೂರು ಕಳೆದ ಆರು ವರ್ಷಗಳಿಂದ ಸಮಾನ ಮನಸ್ಕರಾಗಿದ್ದು, ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡ 15 ಮಿತ್ರರು ‘ಅಭಯ ಫ್ರೆಂಡ್ಸ್’ ಎಂಬ ಸಂಘಟನೆಯ ಹೆಸರಿನಲ್ಲಿ ತಮ್ಮ ಆದಾಯದಲ್ಲಿ ಸ್ವಲ್ಪ ಧನವನ್ನು ಸಮಾಜಸೇವೆಗಾಗಿ ಮೀಸಲಿಟ್ಟು, ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ ಹೆಚ್ಚಿನ ಸಮಾಜಸೇವೆಯನ್ನು ಕೈಗೊಳ್ಳುವ ಉದ್ದೇಶದಿಂದ ಈ ಸಂಘಟನೆಯನ್ನು ಟ್ರಸ್ಟ್ ಆಗಿ ಪರಿವರ್ತಿಸಲಾಗಿದೆ

ದೇವರು ಕೊಟ್ಟಂತಹ ಪ್ರತಿಭೆ ಮತ್ತು ಆದಾಯದಲ್ಲಿ ಸ್ವಲ್ಪ ಭಾಗವಾದರೂ ನಾವು ಸಮಾಜ ಸೇವೆಗೋಸ್ಕರ ವ್ಯಯಿಸಬೇಕು. ಒಳ್ಳೆಯ ಉದ್ದೇಶದಿಂದ, ಸಾಮರ್ಥ್ಯಗನುಗುಣವಾಗಿ ದಾನವಿತ್ತರೆ ದೇವರು ಸಹ ನಮ್ಮನ್ನು ಆಶೀರ್ವದಿಸುತ್ತಾನೆ ಎಂಬ ಕಿವಿಮಾತು ಅವರು ಈ ಸಂದರ್ಭದಲ್ಲಿ ಹೇಳಿದರು ಮತ್ತು ಅಭಯ ಫ್ರೆಂಡ್ಸ್ ಟ್ರಸ್ಟ್ನ ಸದಸ್ಯರಿಗೆ ಈ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಸಹಕಾರದ ಆಶ್ವಾಸನೆಯಿತ್ತರು.

ಅತಿಥಿಯಾಗಿ ಆಗಮಿಸಿದ ‘ದಾಯ್ಕಿ ವರ್ಲ್ಡ್’ನ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರೂ ಆಗಿರುವಂತಹ ಶ್ರೀಯುತ ವಾಲ್ಟರ್ ನಂದಳಿಕೆಯವರು ಇದೇ ಮೇ ತಿಂಗಳಲ್ಲಿ ಅಭಯ ಫ್ರೆಂಡ್ಸ್ ಟ್ರಸ್ಟ್ನ ಆಶ್ರಯದಲ್ಲಿ ನಡೆಯಲಿರುವ ”ವಿಲ್ಪಿ ನಾಯ್ಟ್ ”ನ ಪೋಸ್ಟರನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸಮಾಜ ಸೇವೆ ಎಂದರೆ ಧನಸಹಾಯ ಮಾತ್ರವಲ್ಲ, ನೊಂದವರು ಮತ್ತು ಕಷ್ಟದುಃಖದಲ್ಲಿರುವವರಿಗೆ ಸಾಂತ್ವನ ನೀಡುವುದು ಮತ್ತು ನಮ್ಮಲ್ಲಿರುವ ಪ್ರತಿಭೆಗಳನ್ನು ಇತರರ ಒಳಿತಿಗೋಸ್ಕರ ಬಳಸುವುದು ಸಹ ಸೇವೆಯ ಇತರ ರೂಪಗಳು, ಅಭಯ ಫ್ರೆಂಡ್ಸ್ ಟ್ರಸ್ಟ್ನ ಸದಸ್ಯರು ತಮ್ಮಿಂದ ಸಾಧ್ಯವಾಗುವುದನ್ನು ಈ ಸಮಾಜಕ್ಕೆ ಸೇವೆಯ ರೂಪದಲ್ಲಿ ನೀಡುವಂತಹ ಉತ್ತಮ ಕೆಲಸ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಖ್ಯಾತ ಕೊಂಕಣಿ ಗಾಯಕಿ ‘ಕೊಂಕಣ್ ಮೈನಾ’ ಶ್ರೀಮತಿ ಮೀನಾ ರೆಬಿಂಬಸ್, ಜೆಪ್ಪು ಚರ್ಚ್ ನ ಧರ್ಮ ಗುರುಗಳಾದ ವಂದನೀಯ ಮ್ಯಾಕ್ಸಿಂ ಡಿ’ಸೋಜಾ ಮತ್ತು ಅಭಯ ಫ್ರೆಂಡ್ಸ್ ಟ್ರಸ್ಟ್ನ ಅಧ್ಯಕ್ಷ ಶ್ರೀಯುತ ನಿರ್ಮಲ್ ಡಿ’ಸೋಜಾರವರು ಉಪಸ್ಥಿತರಿದ್ದರು. ಅಭಯ ಫ್ರೆಂಡ್ಸ್ ಟ್ರಸ್ಟ್ನ ಉಪಾಧ್ಯಕ್ಷರಾದ ಶ್ರೀಯುತ ಆಲ್ವಿನ್ ಮಿರಾಂದಾರವರು ಕಾರ್ಯಕ್ರಮ ನಿರೂಪಿಸಿದರು.
















