ಮಂಗಳೂರು: ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಮುಕ್ಕದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಗುರುವಾರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.


ಬಂಧಿತರನ್ನು ಮುಹಮ್ಮದ್ ಮುಖ್ತಾರ್ ಅಲಿ (36), ಮುಹಮ್ಮದ್ ರಾಕಿಬುರ್ ಹುಸೈನ್ (44), ಮುಹಮ್ಮದ್ ಅಝರುಲ್ ಇಸ್ಲಾಂ (36), ಮುಹಮ್ಮದ್ ಝೈದ್ ಹುಸನ್ (18), ಮುಹಮ್ಮದ್ ಬಿಲಾಲ್ ಹುಸೈನ್ (36), ಮುಹಮ್ಮದ್ ಹಾಸಿಬುಲ್ ಹಸನ್ ಶನ್ಟೊ (37), ಮುಹಮ್ಮದ್ ಸಮೀವುಲ್ ಹಸನ್ (23) ಮತ್ತು ಮುಹಮ್ಮದ್ ಸೈಬುಲ್ ರೆಹ್ಮಾನ್ ಎಂದು ಗುರುತಿಸಲಾಗಿದೆ. ಈ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಅವರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ಮುಕ್ಕದ ನಿರ್ಮಾಣ ಹಂತದ ಕಡ್ಡಡಗಳ ಲೇಬರ್ ಶೆಡ್ಗಳಲ್ಲಿ ವಿದೇಶಿ ಅಕ್ರಮ ವಲಸಿಗರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಸುರತ್ಕಲ್ ಪೊಲೀಸ್ ಉಪ ನಿರೀಕ್ಷಕ (SI) ರಘು ನಾಯ್ಕ್ ಅವರಿಗೆ ಲಭ್ಯವಾಗಿತ್ತು. ತಕ್ಷಣವೇ ಸಿಬ್ಬಂದಿಯೊಂದಿಗೆ ಮುಕ್ಕದ ಜೋಪಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ನೆಲೆಸಿದ್ದ ಸುಮಾರು 54 ಕಾರ್ಮಿಕರನ್ನು ತೀವ್ರ ದಾಖಲೆ ಪರಿಶೀಲನೆಗೆ ಒಳಪಡಿಸಿದ್ದರು. ಈ ವೇಳೆ ಎಂಟು ಜನರ ಬಳಿ ಬಾಂಗ್ಲಾದೇಶದ ಅಸಲಿ ರಾಷ್ಟ್ರೀಯ ಗುರುತಿನ ಚೀಟಿಗಳು ಪತ್ತೆಯಾದ ತಕ್ಷಣವೇ ಇಡೀ ಜಾಲವನ್ನು ವಶಕ್ಕೆ ಪಡೆಯಲಾಗಿದೆ.
ಪ್ರಸ್ತುತ ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಮೂಲಕ ‘ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ’ಗೆ (FRRO) ಹಸ್ತಾಂತರಿಸಲಾಗಿದೆ. ಆರೋಪಿಗಳು ನಕಲಿ ಆಧಾರ್ ಕಾರ್ಡ್ ನೀಡಿ ಕೆಲಸ ಪಡೆದಿದ್ದರಿಂದ, ಈ ಅಕ್ರಮದ ಹಿನ್ನೆಲೆ ಇಲ್ಲಿನ ಗುತ್ತಿಗೆದಾರರಿಗೆ ಮುಂಚಿತವಾಗಿ ತಿಳಿದಿತ್ತೇ ಎಂಬ ಬಗ್ಗೆ ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಸಾಮಾನ್ಯವಾಗಿ ಅಕ್ರಮ ವಲಸಿಗರ ವಿರುದ್ಧ ಕಾನೂನು ಕ್ರಮ ಮುಗಿಯುವವರೆಗೆ ಭಾರತದಲ್ಲೇ ಇರಬೇಕಾಗುತ್ತದೆ. ತನಿಖೆ ಮುಗಿದ ತಕ್ಷಣ ಎಫ್ಆರ್ಆರ್ಒ ಸೂಚನೆ ಮೇರೆಗೆ ಇವರನ್ನು ಬಾಂಗ್ಲಾದೇಶಕ್ಕೆ ಗಡಿಪಾರು (Deport) ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.


