ಮುಂಬೈ: 35 ವರ್ಷದ ಮಹಿಳೆಯೊಬ್ಬಳು ಬರೋಬ್ಬರಿ 8 ಸಲ ಮದುವೆಯಾಗಿ, ಅದೇ ಗಂಡಂದಿರಿಗೆ ಮೂರು ನಾಮ ಇಕ್ಕು 9ನೇ ಮದುವೆಯಾಗಲು ಸಿದ್ಧತೆ ನಡೆಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
35ರ ಹರೆಯದ ಸಮೀರಾ ಫಾತಿಮಾ ಈ ಪ್ರಕರಣದ ಆರೋಪಿತೆ. ವಿಶೇಷ ಅಂದರೆ ಫಾತಿಮಾ ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದು, 12 ವರ್ಷದ ಮಗುವನ್ನು ಹೊಂದಿದ್ದಾಳೆ. ಆ ಮಗು ಯಾವ ಗಂಡನದ್ದು ಎಂದು ತಿಳಿದುಬಂದಿಲ್ಲ.
ಸಮೀರಾ ಫಾತಿಮಾ ಮ್ಯಾಟ್ರಿಮೊನಿ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಲಿಂ ಸಮುದಾಯದ ಪುರುಷರನ್ನು ಗುರಿಯಾಗಿಸಿ ತನ್ನ ಖೆಡ್ಡಾಕ್ಕೆ ಬೀಳಿಸುತ್ತಿದ್ದಳು. ಆಕೆ ತಾನೊಂದು ವಿಧವೆ ಎಂದು ಕಟ್ಟುಕಥೆಗಳ ಪುರುಷರನ್ನು ಭಾವನಾತ್ಮಕವಾಗಿ ಒಲಿಸಿಕೊಳ್ಳುತ್ತಿದ್ದಳು.
ಅವರು ಇವಳ ಮಾತಿಗೆ ಮರುಳಾಗುತ್ತಿದ್ದುದು ಕನ್ಫರ್ಮ್ ಆಗುತ್ತಿದ್ದಂತೆ ಆಕೆ ರಿಜಿಸ್ಟರ್ ಮದುವೆಯಾಗೋಣ ಎಂದು ಹೇಳಿ ಸರಳವಾಗಿ ಮದುವೆಯಾಗುತ್ತಿದ್ದಳು. ಅದಾದ ನಂತರ ತನ್ನ ಅಸಲಿ ಆಟ ತೋರಿಸುತ್ತಿದ್ದಳು, ಮದುವೆಯ ನಂತರ ಗಂಡನಿಗೆ ಕಿರುಕುಳ ನೀಡಲು ಪ್ರಾರಂಭಿಸುತ್ತಿದ್ದಳು.
ಅವರೊಂದಿಗೆ ತನ್ನ ಸಂಭಾಷಣೆಗಳನ್ನು ರೆಕಾರ್ಡ್ ಮಾಡುತ್ತಿದ್ದಳು. ನಂತರ, ಅದನ್ನು ತನಗೆ ಬೇಕಾದಂತೆ ಎಡಿಟ್ ಮಾಡಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಳು. ವ್ಯಭಿಚಾರ ಮತ್ತು ಕಿರುಕುಳದ ಆರೋಪದ ಮೇಲೆ ತಾನು ಮದುವೆಯಾದ ಪುರುಷರ ವಿರುದ್ಧ ಪ್ರಕರಣಗಳನ್ನು ಸಹ ದಾಖಲಿಸುತ್ತಿದ್ದಳು. ಕೊನೆಗೆ ಆ ಕೇಸ್ ಹಿಂಪಡೆಯಲು ಗಂಡನಿಂದಲೇ ಹಣ ವಸೂಲಿ ಮಾಡುತ್ತಿದ್ದಳು.
ಅದರಂತೆ ಗುಲಾಮ್ ಪಠಾಣ್ ಎಂಬ ವ್ಯಕ್ತಿ 2024ರಲ್ಲಿ ಆಕೆಯ ವಿರುದ್ಧ ಕೇಸ್ ದಾಖಲಿಸಿದ್ದರು. 2022ರಲ್ಲಿ ಫಾತಿಮಾಳನ್ನು ಮದುವೆಯಾದ ಗುಲಾಮ್ ತನ್ನ ದೂರಿನಲ್ಲಿ, ಫಾತಿಮಾ ತನ್ನ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಿ ತನ್ನಿಂದ 10 ಲಕ್ಷ ರೂ.ಗಳ ಚೆಕ್ ಪಡೆದಿದ್ದಾಳೆ ಎಂದು ಹೇಳಿದ್ದರು. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಫಾತಿಮಾಳನ್ನು ಬೆನ್ನಟ್ಟಿ ನಾಗ್ಪುರದ ಸಿವಿಲ್ ಲೈನ್ಸ್‌ನಲ್ಲಿರುವ ಡಾಲಿ ಕಿ ಟ್ಯಾಪ್ರಿಯಲ್ಲಿ ಅವಳನ್ನು ಬಂಧಿಸಿದ್ದರು.
ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಫಾತಿಮಾ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. ಆದರೆ ಕೊನೆಗೂ ಪೊಲೀಸರು ಅವಳನ್ನು ಬಂಧಿಸಿದರು. ಆಕೆಯನ್ನು ಬಂಧಿಸಿದ ನಂತರ ಇನ್ನೂ 7 ಜನರಿಗೆ ಇದೇ ರೀತಿ ವಂಚನೆ ಮಾಡಿದ್ದಾಳೆ ಎಂಬುದು ಗೊತ್ತಾಗಿದೆ. ಸದ್ಯದಲ್ಲೇ ಆಕೆ 9ನೇ ಮದುವೆಯಾಗಲು ತಯಾರಿ ನಡೆಸಿದ್ದಳು.