COMMUNITY NEWSLATEST NEWS

ಸಾಮಾಜಿಕ ಪರಿವರ್ತನೆಗೆ ಯುವ ಜನರೇ ಮುನ್ನಡಿ: ಹುಣಸೂರಿನಲ್ಲಿ 3 ದಿನಗಳ ವಿದ್ಯಾರ್ಥಿ ಸಮಾವೇಶ

ಹುಣಸೂರು: “ಬದಲಾವಣೆಯನ್ನು ಮುನ್ನಡೆಸಿ: ಭವಿಷ್ಯವನ್ನು ನಿರ್ಮಿಸಿ” ಎಂಬ ಧೈಯ ವಾಕ್ಯದೊಂದಿಗೆ ಹುಣಸೂರಿನ ಸಂತ ಜೋಸೆಫರ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಮೂರು ದಿನಗಳ ‘ಸಾಮಾಜಿಕ ಪರಿವರ್ತನಾ ಪ್ರೇರಕರ ವೇದಿಕೆ’ಯ ಸಮಾವೇಶವು ಯಶಸ್ವಿಯಾಗಿ ನೆರವೇರಿತು.

ಅರ್ಸುಲಾಯ್ ಫ್ರಾನ್ಸಿಸ್ಕನ್ ವಿದ್ಯಾ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಸಮಾವೇಶದಲ್ಲಿ ದಕ್ಷಿಣ ಭಾರತದ ಮೂರು ರಾಜ್ಯಗಳ 29 ಶಾಲೆಗಳ 150 ಹದಿಹರೆಯದ ವಿದ್ಯಾರ್ಥಿಗಳು ಪಾಲ್ಗೊಂಡು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಪಡೆದುಕೊಂಡರು.

ಜಾಗೃತಿ ಮೂಡಿಸಿದ ಬೀದಿ ನಾಟಕ:

ಈ ಸಮಾವೇಶದ ಆರಂಭವು ಅತ್ಯಂತ ಅರ್ಥಪೂರ್ಣವಾಗಿತ್ತು. ಹುಣಸೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕ ಜಾಗೃತಿ ಜಾಥಾ ನಡೆಸಿದರು. ಪ್ರಚಲಿತ ಸಾಮಾಜಿಕ ಪಿಡುಗುಗಳಾದ ಮಾದಕ ವ್ಯಸನ ತಡೆಗಟ್ಟುವಿಕೆ ಮತ್ತು ಬಾಲ್ಯ ವಿವಾಹ ನಿಷೇಧದ ಕುರಿತಾದ ಸ್ತಬ್ದಚಿತ್ರಗಳು ಸಾರ್ವಜನಿಕರ ಗಮನ ಸೆಳೆದವು. ಇದರೊಂದಿಗೆ, ಸ್ವಚ್ಛತೆಯ ಮಹತ್ವ ಸಾರುವ ತ್ಯಾಜ್ಯ ನಿರ್ವಹಣೆ ಕುರಿತ ಬೀದಿ ನಾಟಕದ ಮೂಲಕ ಪಟ್ಟಣದ ಜನರಲ್ಲಿ ಅರಿವು ಮೂಡಿಸಲಾಯಿತು.

ಮನಸ್ಥಿತಿಯ ಬದಲಾವಣೆ ಅಗತ್ಯ: ಬಿಷಪ್

ಸಂತ ಜೋಸೆಫರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಮೈಸೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಫ್ರಾನ್ಸಿಸ್ ಸೆರಾವೊ ಮಾತನಾಡಿ, “ಸಾಮಾಜಿಕ ಪರಿವರ್ತನೆ ತರಬೇಕಾದರೆ ಮೊದಲು ನಮ್ಮ ಸೈಧಾಂತಿಕ ಮನಸ್ಥಿತಿಯಲ್ಲಿ ಬದಲಾವಣೆಯಾಗುವ ಅಗತ್ಯವಿದೆ” ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹುಣಸೂರು ತಹಸೀಲ್ದಾರ್ ಶ್ರೀ ಮಂಜುನಾಥ್ ಜೆ. ಮಾತನಾಡಿ, “ವಿದ್ಯಾರ್ಥಿಗಳು ಕೇವಲ ವೈಯಕ್ತಿಕ ಹಿತಾಸಕ್ತಿಗಳಿಗೆ ಸೀಮಿತವಾಗದೆ, ಸಮಾಜದಲ್ಲಿ ಇತರರ ಅಗತ್ಯಗಳಿಗೆ ಸ್ಪಂದಿಸುವಂತಹ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು” ಎಂದರು. ಹುಣಸೂರು ಪುರಸಭೆಯ ಆಯುಕ್ತರಾದ ಶ್ರೀಮತಿ ಮಾನಸ ಎಮ್ ರವರು ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.

ಸಮಾವೇಶದಲ್ಲಿ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಯುವ ಸಾಧಕರು ತಮ್ಮ ನೈಜ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದರು. ಇದೇ ವೇಳೆ ಪರಿಸರ ಸಂರಕ್ಷಣೆಯ ಕುರಿತು ನಡೆದ ವಿವಿಧ ಪ್ರಾತ್ಯಕ್ಷಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಿದವು.

ಯುವ ಸಾಧಕರಿಂದ ಪ್ರೇರಣೆ – ಪರಿಸರ ಸಂರಕ್ಷಣೆ ಸಂಕಲ್ಪ

ಸಮಾವೇಶದಲ್ಲಿ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಯುವ ಸಾಧಕರು ತಮ್ಮ ನೈಜ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದರು. ಇದೇ ವೇಳೆ ಪರಿಸರ ಸಂರಕ್ಷಣೆಯ ಕುರಿತು ನಡೆದ ವಿವಿಧ ಪ್ರಾತ್ಯಕ್ಷಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಿದವು.

ಗಣ್ಯರ ಉಪಸ್ಥಿತಿ ಮತ್ತು ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯರಾದ ಶ್ರೀ ತಿಪ್ಪೇಸ್ವಾಮಿ ಕೆ.ಟಿ, ಯುನಿಸೆಫ್-ಕೊಪ್ಪಳದ ಕಾರ್ಯಕ್ರಮ ಸಂಯೋಜಕರಾದ ಶ್ರೀ ಹರೀಶ್ ಜೋಗಿ, ಅಜೀಂ ಪ್ರೇಮ್‌ಜಿ ಫೌಂಡೇಶನ್‌ನ ಸಂಪನ್ಮೂಲ ವ್ಯಕ್ತಿ ಕು. ಜಯಮ್ಮ ಹಾಗೂ ಅರ್ಸುಲಾಯ್ಡ್ ಫ್ರಾನ್ಸಿಸ್ಕನ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ವಂದನೀಯ ಭಗಿನಿ ಮಿಲ್ಲಿ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಮಾಜಮುಖಿ ಹಾಗೂ ಅರ್ಥಪೂರ್ಣ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ವಿವಿಧ ಶಾಲೆಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Share News