Site icon canaratvnews

ಡೈವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಲೇರಿದ್ದ 15 ಜೋಡಿ ಮತ್ತೆ ಹಾರ ಬದಲಿಸಿ ಒಂದಾದ ಕ್ಷಣ…!

ಧಾರವಾಡ: ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ ಸೇರಿದಂತೆ ವಿವಿಧ ಕಾರಣದಿಂದ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ 15 ದಂಪತಿ  ನ್ಯಾಯಾಧೀಶರ ಮನವೊಲಿಕೆ ಮತ್ತು ಸಮಾಲೋಚನೆಯ ಬಳಿಕ ಮತ್ತೆ ಒಂದಾದರು. ಎಲ್ಲವನ್ನೂ ಮರೆತು ಮತ್ತೊಮ್ಮೆ ಹೊಸ ಜೀವನಕ್ಕೆ ಜೋಡಿಗಳು ಕಾಲಿಟ್ಟಿದ್ದು, ಈ ಅಪರೂಪದ ಘಟನೆಗೆ ಧಾರವಾಡ ಜಿಲ್ಲಾ ನ್ಯಾಯಾಲಯ ಇಂದು ಸಾಕ್ಷಿಯಾಯಿತು.

ಕೈಯಲ್ಲಿ ಹೂವಿನ ಮಾಲೆ ಹಿಡಿದು ನಿಂತಿರುವ ಜೋಡಿಗಳು, ಅವರಿಗೆ ಬುದ್ಧಿ ಮಾತು ಹೇಳುತ್ತಿರುವ ನ್ಯಾಯಾಧೀಶರು, ಈ ಎಲ್ಲ ದೃಶ್ಯಗಳಿಗೆ ಇಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಸಾಕ್ಷಿಯಾಗಿತ್ತು.

ದಾಂಪತ್ಯ ಕಲಹ, ವೈಮನಸ್ಸು ಹಾಗೂ ಕುಟುಂಬದ ಭಿನ್ನಾಭಿಪ್ರಾಯಗಳಿಂದ ವರ್ಷಗಳ ಕಾಲ ದೂರವಾಗಿದ್ದ ದಂಪತಿಗಳು, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನ್ಯಾಯಾಲಯದ ಸಮಾಲೋಚನೆ, ಮನವೊಲಿಕೆ ಹಾಗೂ ಪರಸ್ಪರ ಅರ್ಥೈಸುವಿಕೆಯ ಮೂಲಕ 15 ಜೋಡಿಗಳು ಮತ್ತೆ ಒಂದಾಗಲು ಒಪ್ಪಿಗೆ ಸೂಚಿಸಿದರು.

ನ್ಯಾಯಾಧೀಶ ನಾಗರಾಜಪ್ಪ ಎ. ಕೆ. ಅವರ ನೇತೃತ್ವದಲ್ಲಿ ನಡೆದ ಸಮಾಲೋಚನೆ ಫಲ ನೀಡಿತು. ವರ್ಷಗಳ ಅಂತರವನ್ನು ಮರೆತು ದಂಪತಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ಹೊಸ ಬದುಕಿಗೆ ಕಾಲಿಟ್ಟರು. ನ್ಯಾಯಾಲಯದ ಆವರಣವೇ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಪ್ರತಿಯೊಂದು ಜೋಡಿಯ ಹಿಂದೆಯೂ ಒಂದೊಂದು ನೋವಿನ ಕಥೆಯಿದ್ದರೂ, ಅಂತಿಮವಾಗಿ ಎಲ್ಲರೂ ಹೊಸ ಜೀವನದತ್ತ ಮುಖ ಮಾಡಿದ್ದಾರೆ.

ಒಂದು ಸುಂದರವಾದ ಸಂಸಾರ ನಡೆಸಿ ಸುಖಮಯ ಜೀವನ ನಡೆಸಬೇಕಿದ್ದ ದಂಪತಿ ಯಾವುದೋ ಒಂದು ಕಾರಣಕ್ಕೆ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋದಾಗ ಹೀಗೆ ಬುದ್ದಿವಾದ ಹೇಳಿ ಒಂದು ಮಾಡಿರುವುದು ವಿಶೇಷವಾಗಿದೆ. ಹಲವಾರು ವರ್ಷಗಳ ವೈಮನಸ್ಸಿಗೆ ತೆರೆ ಎಳೆದು 15 ಜೋಡಿಗಳು ಸಂತಸದಿಂದ ಹೊಸ ಬದುಕು ಆರಂಭಿಸಿದ್ದು, ನ್ಯಾಯಾಧೀಶರು, ವಕೀಲರು ಹಾಗೂ ಕುಟುಂಬಸ್ಥರು ಶುಭ ಹಾರೈಸಿದರು.

Share News
Exit mobile version