ಮಂಗಳೂರು: “ಸಾಹಿತ್ಯಕ್ಕೆ ಅದ್ಭುತವಾದ ಶಕ್ತಿ ಇದೆ. ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಸದಾ ಸಂತೋಷದಿಂದ ಇರುತ್ತಾರೆ” ಎಂದು ಮೀನುಗಾರಿಕಾ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಎಂ. ಎಸ್. ಶಿವಪ್ರಕಾಶ್ ಅವರು ತಿಳಿಸಿದರು.

ಅಮೃತ ಪ್ರಕಾಶ ಪತ್ರಿಕೆ ಹಾಗೂ ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 120ನೇ ‘ಸಾಹಿತ್ಯ ಅಭಿರುಚಿ’ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ನಾಯ್ಕ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜೆನ್ಝೀ ಗುಂಗಿನಿಂದ ಹೊರಬನ್ನಿ – ವಿಜಯ್ ಕೋಟ್ಯಾನ್:
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ವಿಜಯ್ ಕೋಟ್ಯಾನ್ ಅವರು, “ವಿದ್ಯಾರ್ಥಿಗಳು ಹಾಗೂ ಯುವಸಮುದಾಯ ಕೇವಲ ದೇಶದ ಭವಿಷ್ಯ ಮಾತ್ರವಲ್ಲ, ಸಮಾಜದ ಸಂಸ್ಕೃತಿ, ಸಂಸ್ಕಾರ ಮತ್ತು ಜ್ಞಾನದ ವಾರೀಸುದಾರರು. ಸಾಹಿತ್ಯವೆಂದರೆ ಕೇವಲ ಪುಸ್ತಕ ಓದುವುದಲ್ಲ, ಅದು ಬದುಕು ಎಂಬ ವಾಸ್ತವವನ್ನು ನಾವು ಅರಿತುಕೊಳ್ಳಬೇಕು. ಕಥೆ, ಕವನ, ಕಾದಂಬರಿ, ನಾಟಕ, ಜೀವನಚರಿತ್ರೆ ಹಾಗೂ ಜನಪದ ಸಾಹಿತ್ಯಗಳು ವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕುತ್ತವೆ” ಎಂದರು.
ಮುಂದುವರಿದು ಮಾತನಾಡಿದ ಅವರು, “ವಿದ್ಯಾರ್ಥಿಗಳು ಜೆನ್ಝೀ, ಅಲ್ಟ್ರಾ ಜೆನ್ಝೀ ಎಂಬ ಗುಂಗಿನಿಂದ ಹೊರಬಂದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಹಿಂದಿನ ಪೀಳಿಗೆಯಲ್ಲಿ ವಯಸ್ಸಿನ ಅಂತರವಿತ್ತೇ ಹೊರತು ಸಂಬಂಧಗಳ ಮೌಲ್ಯಗಳ ಬಗ್ಗೆ ಸ್ಪಷ್ಟ ಅರಿವಿತ್ತು. ಆದರೆ ಆಧುನಿಕ ಯುಗದ ಜೆನ್ಝೀ ಮನಸ್ಥಿತಿ ಎಲ್ಲ ಮೌಲ್ಯಗಳನ್ನು ನಾಶಮಾಡಲು ಹೊರಟಿರುವುದು ಆತಂಕಕಾರಿ ವಿಷಯ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ಜಾಗರೂಕರಾಗಿ ಹೆಜ್ಜೆ ಇಡಬೇಕಾಗಿದೆ” ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮೀಡಿಯಾ ಮನಸ್ಸು ತಂಡದ ರೂವಾರಿ ಶಶಿ ಬೆಳಾಯರು ಅವರಿಗೆ ‘ಅಮೃತ ಪ್ರಕಾಶ ಸಮಾಜ ಸೇವಾ ರತ್ನ 2026’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಅರುಣ ಕುಮಾರಿ ಉಪಸ್ಥಿತರಿದ್ದರು. ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಯಶೋಧಕುಮಾರಿ ವಂದಿಸಿದರು. ಡಾ. ಅರುಣರಾಗರಾಜ್ ಕಾರ್ಯಕ್ರಮ ನಿರೂಪಿಸಿದರು.
