ಮಂಗಳೂರು: ಮಾದಕ ವಸ್ತು ಸಾಗಾಟ ಜಾಲವೊಂದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು, ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿ ಆತನಿಂದ ರೂ 1,05,59,450 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಬಂಧಿತ ಆರೋಪಿ.
ಆ.15ರಂದು ತಡರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ ಅವರು ಹಾಸನ ಕಡೆಯಿಂದ ಮಂಗಳೂರು ಕಡೆಗೆ ಮಾದಕವಸ್ತು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಸಿಬ್ಬಂದಿಯೊಂದಿಗೆ ತಡರಾತ್ರಿ ಕಡೇಶಿವಾಲಯ ಗ್ರಾಮದ ಅಮೈ ಎಂಬಲ್ಲಿ ಕಾರೊಂದನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಕಾರಿನಲ್ಲಿ ಮಾದಕವಸ್ತು ಪತ್ತೆಯಾಗಿದೆ. ಕಾರಿನಲ್ಲಿ ಒಟ್ಟು 538.63 ಗ್ರಾಂ ಎಂಡಿಎಂಎ ಮತ್ತು 99.12 ಗ್ರಾಂ ಕೊಕೈನ್ ಹಾಗೂ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ, ಸೇರಿದಂತೆ ಇತರೆ ಸೊತ್ತುಗಳು ಪತ್ತೆಯಾಗಿರುತ್ತದೆ. ಮಾದಕ ವಸ್ತುಗಳ ಅಂದಾಜು ಮೌಲ್ಯವು ಎಂಡಿಎಂಎ ರೂ.53,86,300 ಹಾಗೂ ಕೊಕೈನ್ 49,56,000 ರೂ. ಆಗಿದ್ದು, ಇತರೆ ವಶಪಡಿಸಿ ಕೊಂಡ ಸೊತ್ತುಗಳ ಮೌಲ್ಯ ಸೇರಿದಂತೆ ಒಟ್ಟು ಅಂದಾಜು ಮೌಲ್ಯ 1,05,59,450 ಆಗಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗಾಧೀಕ್ಷಕರಾದ ಯಶ್ ಕುಮಾರ್ ಶರ್ಮ ಐಪಿಎಸ್ ರವರ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಪ್ರಭಾರ ಪಿ ಐ ಅನಂತ ಪದ್ಮನಾಭ ಮಾರ್ಗದರ್ಶನದಲ್ಲಿ, ಬಂಟ್ವಾಳ ಗ್ರಾಮಾಂತರ ಪಿ.ಎಸ್.ಐ ಮಂಜುನಾಥ್ ಟಿ ರವರ ನೇತೃತ್ವದಲ್ಲಿ, CPC ಅಶೋಕ್, CPC ರಾಘವೇಂದ್ರ, CHC ಪ್ರಶಾಂತ್, CHC ಲೋಕೇಶ್, CHC ಶ್ರೀಧರ್, CHC ನಜಿರ್, CPC ವಿವೇಕ್, CPC ಕುಮಾರ್ ಹಾಗೂ CPC ಉದಯ್ ರವುಗಳನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿರುತ್ತದೆ.
