ಪುತ್ತೂರು: ಬಂಟ್ವಾಳ ತಾಲೂಕು ವ್ಯಾಪ್ತಿಯ ಕಾಂಞಂ ಗಾಡು-ಕಡೂರು ರಾಜ್ಯ ಹೆದ್ದಾರಿಯ ಬೊಬ್ಬೆಕೇರಿ ಎಂಬಲ್ಲಿನ ರಸ್ತೆ ಸಮಸ್ಯೆಗೆ ಕೊನೆಗೂ ಶಾಶ್ವತ ಪರಿಹಾರ ದೊರೆತಿದೆ. ಇಲ್ಲಿನ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಾಗಿ ೬೦ ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಸಾರ್ವಜನಿಕರ ದಶಕಗಳ ಬೇಡಿಕೆ ಈಡೇರಿದಂತಾಗಿದೆ.
ಅಂತರರಾಜ್ಯ ಸಂಪರ್ಕಿಸುವ ಪ್ರಮುಖ ಹೆದ್ದಾರಿಯ ಬೊಬ್ಬೆಕೇರಿಯಲ್ಲಿ ರಸ್ತೆ ಅತ್ಯಂತ ಕಿರಿದಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಖಾಸಗಿ ಜಮೀನು ಇದ್ದ ಕಾರಣ ಅಗಲೀಕರಣ ಮಾಡಲು ಸಾಧ್ಯವಾಗಿರಲಿಲ್ಲ. ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲದ ಕಾರಣ ಮಳೆನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಕಿರಿದಾದ ರಸ್ತೆಯಿಂದಾಗಿ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು, ಪಾದಚಾರಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ನಡೆದಾಡಲು ಜಾಗವೇ ಇಲ್ಲದಂತಾಗಿತ್ತು.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಪುತ್ತೂರು ಶಾಸಕ ಅಶೋಕ್ ರೈ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳ ನ್ನು ಸ್ಥಳಕ್ಕೆ ಕರೆಸಿ ಅಗಲೀಕರಣದ ಬಗ್ಗೆ ಚರ್ಚಿಸಿದ್ದರು. ಅಲ್ಲದೆ, ರಸ್ತೆ ಬದಿಯ ಖಾಸಗಿ ಜಮೀನು ಮಾಲಕ ರೊಂದಿಗೆ ಸಮಾಲೋಚನೆ ನಡೆಸಿ, ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದರು. ಅಂದು ನೀಡಿದ ಭರವಸೆಯಂತೆ ಶಾಸಕರು ಈಗ ೬೦ ಲಕ್ಷ ರೂ. ಅನುದಾನ ಮಂಜೂರು ಮಾಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.
“ಬೊಬ್ಬೆಕೇರಿಯಲ್ಲಿ ರಸ್ತೆ ಕಿರಿದಾಗಿದ್ದರಿಂದ ವಾಹನ ಸವಾರರಿಗೆ ಹಾಗೂ ಶಾಲಾ ಮಕ್ಕಳಿಗೆ ಜೀವಭಯವಿತ್ತು. ಇದು ಅತ್ಯಂತ ಅಪಾಯಕಾರಿ ಸನ್ನಿವೇಶವಾಗಿದ್ದರಿಂದ ಜಮೀನು ಮಾಲಕರೊಂದಿಗೆ ಮಾತನಾಡಿದ್ದೇನೆ. ಸಾರ್ವಜನಿಕ ಹಿತದೃಷ್ಟಿಯಿಂದ ಯಾರೇ ಅಡ್ಡಿಪಡಿಸಿದರೂ ಇಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವುದು ಖಚಿತ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ,” ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಈ ಕ್ರಮಕ್ಕೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಚಾಲಕರು ಶಾಸಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

