• Home  
  • ದ.ಕ. ಯುವಜನತೆಯ ಪ್ರತಿಭೆ, ವೃತ್ತಿಜೀವನ, ಉದ್ಯಮಶೀಲತೆ ಉತ್ತೇಜನಕ್ಕಾಗಿ ‘ಯುವ್ವಿಕಾಸ’ ಸಂಕಲ್ಪ: ಸಂಸದ ಕ್ಯಾ. ಚೌಟ
- DAKSHINA KANNADA

ದ.ಕ. ಯುವಜನತೆಯ ಪ್ರತಿಭೆ, ವೃತ್ತಿಜೀವನ, ಉದ್ಯಮಶೀಲತೆ ಉತ್ತೇಜನಕ್ಕಾಗಿ ‘ಯುವ್ವಿಕಾಸ’ ಸಂಕಲ್ಪ: ಸಂಸದ ಕ್ಯಾ. ಚೌಟ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಯುವ ಸಮುದಾಯಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುವ, ಅವರ ಯೋಚನೆ- ಕನಸುಗಳಿಗೆ ಶಕ್ತಿ ಕೊಡುವ ಹಾಗೂ ಸಾಧ್ಯತೆಗಳನ್ನು ಅನ್ವೇಷಿಸುವ ಗುರಿಯೇ ‘ಯುವ್ವಿಕಾಸ್’ ಸಂಕಲ್ಪ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.

ಸುಳ್ಯದ ತಾಲೂಕು ಪಂಚಾಯತ್‌ನಲ್ಲಿ ಇಂದು ಸಂಸದರ ಕಚೇರಿ ಹಾಗೂ ಸುಂದರ ಭಾರತ ಟ್ರಸ್ಟ್‌ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ’ಯುವ್ವಿಕಾಸ್ ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲೆಯ ಯುವ ಶಕ್ತಿಗಳನ್ನು ಜಾಗೃತಗೊಳಿಸುವ ಜೊತೆಗೆ ಅವರಿಗೆ ಉಜ್ವಲ ಭವಿಷ್ಯ ರೂಪಿಸುವ ಆಶಯದಡಿ ಯುವ್ವಿಕಾಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದು ನಮ್ಮ ಮೊದಲ ಪ್ರಯತ್ನ. ನಮ್ಮ ಜಿಲ್ಲೆಯಲ್ಲಿಯೇ ಯುವಕರಿಗೆ ವಿವಿಧ ಕ್ಷೇತ್ರಗಳ ಉದ್ಯೋಗವಕಾಶವನ್ನು ತಿಳಿಸಿಕೊಡುವುದು, ಆಕಾಂಕ್ಷಿಗಳಿಗೆ ಉದ್ಯೋಗ ದೊರಕುವಂತೆ ಮಾಡುವುದು ಹಾಗೂ ಉದ್ದಿಮೆ, ಸ್ಟಾಟರ್ಪ್ ಗಳಿಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಜೊತೆಗೆ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಪೂರಕವಾದ ಸಮಗ್ರ ಯುವ ಸಬಲೀಕರಣಕ್ಕೆ ಒತ್ತು ನೀಡುವ ಪ್ರಯತ್ನ ಮಾಡಲಾಗುವುದು. ಅಲ್ಲದೆ ಕೇಂದ್ರ ಸರ್ಕಾರದ ‘ಮುದ್ರಾ ಯೋಜನೆ’, ‘ಸ್ಟ್ಯಾಂಡ್-ಅಪ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’ ಮುಂತಾದ ಯೋಜನೆಗಳು ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಯುವ ಶಕ್ತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ದಕ್ಷಿಣ ಕನ್ನಡವು ಸಾಧ್ಯತೆಗಳ ಸಾಗರ – ಅವಕಾಶಗಳ ಕಡಲು. ಇಂದಿನ ಡಿಜಿಟಲ್ ಯುಗಕ್ಕೆ ಬೇಕಾಗಿರುವಂತ ಬ್ಯಾಂಕಿಂಗ್, ಶಿಕ್ಷಣ ಮತ್ತು ಉದ್ಯಮದಲ್ಲಿ ನಮ್ಮ ಪ್ರದೇಶವು ಬಹಳ ಹಿಂದೆಯೇ ಪ್ರವರ್ತಕರನ್ನು ನೀಡಿದೆ. ಅವರಿಗೆ ಇಂದಿನಷ್ಟು ಸುಲಭವಾಗಿ ಮಾಹಿತಿಗಳ ಲಭ್ಯತೆ ಇರಲಿಲ್ಲ, ಆದರೆ ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ದೃಷ್ಟಿಕೋನವಿತ್ತು. ಹೀಗಾಗಿ ಯುವ ಜನತೆಯು ಭಯಮುಕ್ತ ವಾತಾವರಣದಿಂದ ಹೊರಬರಬೇಕು, ಸಾಮಾನ್ಯ ಕುಟುಂಬದಿಂದ ಬಂದವರು ಕೂಡಾ ಉದ್ಯಮಶೀಲರಾಗಬೇಕು ಎಂಬ ಕನಸು ನಮ್ಮದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ವಿಕಸಿತ ಭಾರತಕ್ಕೆ ಇಂತಹ ಕಾರ್ಯಕ್ರಮಗಳು ಹೆಜ್ಜೆಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ” ಗ್ರಾಮೀಣ ಭಾಗದಿಂದ ಯುವಜನತೆಯು ಕೂಡಾ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಬೇಕು. ಇದಕ್ಕಾಗಿ ಸರ್ಕಾರಿ ಯೋಜನೆಗಳು ಹಾಗೂ ‘ಯುವ್ವಿಕಾಸ್’ ನಂತಹ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಆರ್ಥಿಕವಾಗಿ ಸದೃಢರಾಗಿ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಸಂಸದರ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಐಟಿ ಕ್ಷೇತ್ರದ ಪರಿಣತರಾಗಿರುವ ಮಹಂತೇಶ್ ಕಟಗೇರಿ, ಬಿಪಿಓ ಕ್ಷೇತ್ರದ ಕುರಿತು ಪ್ರಸನ್ನ ಕೃಷ್ಣಯ್ಯ, ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹರೀಶ್ ಕುಮಾರ್, ಎಐ ಉದ್ಯೋಗಕಾಶಗಳ ಭಾರತೀಯ ಆಡಳಿತ ಫೆಲೋ ಹಾಗೂ ಸುಂದರ ಭಾರತ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪ್ರತಾಪ್ ಕೆ. ಪರಾಶರ್ ಉಪಯುಕ್ತ ಮಾಹಿತಿ ನೀಡಿದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಶುಭಹಾರೈಸಿದರು.

ಇದೇ ವೇಳೆ ಸುಂದರ ಭಾರತ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಜಿಲ್ಲೆಯ 115 ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ 12 ಸಾವಿರ ಪುಸ್ತಕವನ್ನು ವಿತರಿಸಲು ನಿರ್ಧರಿಸಲಾಗಿದ್ದು ಇಂದು ಸಾಂಕೇತಿಕವಾಗಿ ಕೆಲ ಶಾಲೆಗೆ ವಿತರಿಸಲಾಯಿತು. ಸುಂದರ ಭಾರತ ಪ್ರತಿಷ್ಠಾನ ಸುಳ್ಯಕ್ಕೆ ಪರಿಚಯಿಸಿದ ಕೋಲ್ಚಾರು ಶಾಲಾ ಶಿಕ್ಷಕಿ ಜಲಜಾಕ್ಷಿ ಕೆ.ಟಿ. ಯವರನ್ನು ಗೌರವಿಸಲಾಯಿತು. ಪುಸ್ತಕ ಸ್ವೀಕರಿಸಿದವರ ಪರವಾಗಿ ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲ ಪ್ರಕಾಶ್ ಮೂಡಿತುಪ್ಪ ಕೃತಜ್ಞತೆ ಸಲ್ಲಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678