ಬಂಟ್ವಾಳ ವಿಟ್ಲ : ನ 16. : ಒಬ್ಬರು ಬದಲಾದರೆ ಕುಟುಂಬ ಬದಲಾಗುತ್ತದೆ. ಕುಟುಂಬ ಬದಲಾದರೆ ದೇವಾಲಯಗಳಲ್ಲಿ ಬದಲಾವಣೆಯಾಗುತ್ತದೆ. ದೇವಾಲಯಗಳಲ್ಲಿ ಬದಲಾವಣೆಯಾದರೆ ಇಡೀ ಪವಿತ್ರ ಸಭೆಯು ಬದಲಾಗುತ್ತದೆ. ಈ ಬದಲಾವಣೆಯ ಮೂಲವೇ ಕಿರು ಕ್ರಿಸ್ತ ಸಮುದಾಯ ಎಂದು ಮಂಗಳೂರು ಕಥೋಲಿಕ ಕಿರು ಕ್ರಿಸ್ತ ಸಮುದಾಯ ಪವಿತ್ರ ಸಭೆಯ ನಿರ್ದೇಶಕ ವಂ. ಗುರುಗಳಾದ ಸುನಿಲ್ ಜೋರ್ಜ್ ಡಿಸೋಜ ಅವರು ಅಭಿಪ್ರಾಯವಿತ್ತರು.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಸಮುದಾಯ ಭವನದಲ್ಲಿ ಸಂತ ಜಾನ್ ಪಾವ್ಲರ ದ್ವಿತೀಯ ವಿಟ್ಲ ವಲಯ ಇದರ ಕಿರು ಕ್ರಿಸ್ತ ಸಮುದಾಯ ಸಮಾವೇಷದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಕಿರು ಕ್ರಿಸ್ತ ಸಮುದಾಯಗಳ ಮುಖ್ಯ ಉದ್ದೇಶವು ಚರ್ಚ್ ಅನ್ನು ಜನರೊಳಗೆ ಕರೆತರಿಸುವುದು. ಚರ್ಚ್ ಅನ್ನು ದೊಡ್ಡ ಸಂಸ್ಥೆಯಾಗಿ ಮಾತ್ರವಲ್ಲ, ಸಣ್ಣ–ಸಣ್ಣ ಕುಟುಂಬಗಳ ಜಾಲವಾಗಿ ರೂಪಿಸುವುದೇ ಇದರ ದಿಟ್ಟ ದೃಷ್ಟಿ. ಕಿರು ಕ್ರಿಸ್ತ ಸಮುದಾಯ ಜನರನ್ನು ಒಂದಾಗಿಸುತ್ತದೆ. ಒಂದೇ ಕಾಲೋನಿ, ಒಂದೇ ವಾರ್ಡಿನವರು ತಿಂಗಳಿಗೆ ಒಮ್ಮೆ ಸೇರಿ ದೇವರ ವಾಕ್ಯವನ್ನು ಕೇಳುತ್ತಾರೆ, ಹಂಚಿಕೊಳ್ಳುತ್ತಾರೆ, ಪ್ರಾರ್ಥಿಸುತ್ತಾರೆ. ಇದರಿಂದ ನಮ್ಮ ವಿಶ್ವಾಸ ಕೇವಲ ಭಾನುವಾರಕ್ಕೆ ಸೀಮಿತವಾಗದೆ, ಪ್ರತಿದಿನದ ಜೀವನಕ್ಕೆ ಬರುತ್ತದೆ ಎಂದರು. ಮಂಗಳೂರು ಕಥೋಲಿಕ ಪವಿತ್ರ ಸಭೆಯ ಕಿರು ಕ್ರಿಸ್ತ ಸಮುದಾಯದ ಕಾರ್ಯದರ್ಶಿ ಆಶಾ ಮೊಂತೇರೋ ಅವರು ಕಿರು ಕ್ರಿಸ್ತ ಸಮುದಾಯದ ಏಳು ಮೆಟ್ಟಿಲು ವಿಧಾನದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂತ ಜಾನ್ ಪಾವ್ಲರ ದ್ವಿತೀಯ ವಿಟ್ಲ ವಲಯ ಇದರ ವಿಗಾರ್‌ವಾರ್ ಐವನ್ ರೊಡ್ರಿಗಸ್ ಅವರು ಮಾತನಾಡಿ, ಕಿರು ಕ್ರಿಸ್ತ ಸಮುದಾಯ ನಮ್ಮ ಅಸ್ಮಿತೆ. ಇದರಿಂದ ನಮ್ಮ ಸಮುದಾಯದಲ್ಲಿ ಸಂಬಂಧಗಳನ್ನು ಬೆಸೆಯುವ ಕಾರ್ಯ ಮಾಡುತ್ತದೆ. ಇದರಿಂದ ಹಲವು ನಾಯಕತ್ವ ಗುಣಗಳು ಹುಟ್ಟಿಕೊಂಡಿವೆ ಎಂದು ಸಂದೇಶವಿತ್ತರು. ಇದೇ ವೇಳೆ ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಲ್ಫ್ರೆಡ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ಹಾಗೂ ಕಿರು ಕ್ರಿಸ್ತ ಸಮುದಾಯ ವಲಯ ಪವಿತ್ರ ಸಭೆಯ ನಿರ್ದೇಶಕ ವಂ. ಗುರುಗಳಾದ ಫಾ. ಸೈಮನ್ ಡಿಸೋಜ ಕಾರ್ಯಕ್ರಮವನ್ನು ಮುನ್ನಡೆಸಿದರು. ವಲಯ ಸಂಯೋಜಕಿ ರೀಟಾ ಫೆರ್ನಾಂಡೀಸ್ ಸ್ವಾಗತಿಸಿದರು. ವೇದಿಕೆಯಲ್ಲಿ ಕಿರು ಕ್ರಿಸ್ತ ಸಮುದಾಯದ ಪೆರುವಾಯಿ ಇದರ ಸಂಯೋಜಕ ವಿನ್ಸೆಂಟ್ ಡಿಸೋಜ, ಫಾತಿಮಾ ಮಾತೆಯ ದೇವಾಲಯದ ಆಡಳಿತ ಮಂಡಳಿಯ ಉಪಾಧ್ಯಕ್ಷ ಡೆನಿಸ್ ಮೊಂತೇರೋ, ಕಾರ್ಯದರ್ಶಿ ವೈಲೆಟ್ ಕುವೆಲ್ಲೊ ಸೇರಿ ಹಲವರು ಉಪಸ್ಥಿತರಿದ್ದರು. ಸಂತೋಷ್ ಮೊಂತೇರೋ ನಿರೂಪಿಸಿದರು.





















- COMMUNITY NEWS
- DAKSHINA KANNADA
- HOME
- LATEST NEWS


