canaratvnews

*ಸಮಾಜಮುಖಿಯಾಗಿ ಚಿಂತಿಸಿದ ಮೊದಲ ಶಿಕ್ಷಣ ಸಂಸ್ಥೆ ವಿದ್ವತ್ ಕಾಲೇಜು : ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ *

ಬೆಳ್ತಂಗಡಿ, ಫೆ.9: ದ.ಕ.ಜಿಲ್ಲೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕ್ಷೇತ್ರ. ನಮ್ಮಲ್ಲಿ ಅನೇಕರು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅದರಲ್ಲೂ ವಿದ್ವತ್ ಶಿಕ್ಷಣ ಸಂಸ್ಥೆ ಸಮಾಜಮುಖಿಯಾಗಿ ಚಿಂತಿಸಿ, ಸಮಾಜದ ವಿದ್ಯಾರ್ಥಿಗಳಿಗಾಗಿ 54 ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಿವೆ, ಅದಕ್ಕೆ ಹೇಗೆ ತಯಾರಿ ನಡೆಸಬೇಕೆಂಬ ನೆಲೆಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಉಚಿತವಾಗಿ ಮಾರ್ಗದರ್ಶನ ನೀಡಲು ಮುಂದಾಗಿರುವ ಏಕೈಕ ಕಾಲೇಜೆಂದರೆ ಅದು ವಿದ್ವತ್ ಕಾಲೇಜು ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಹೇಳಿದರು.

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಿಂದ ಸೆ.8 ರಂದು ಕಾಲೇಜಿನ ಆವರಣದಲ್ಲಿ ನಡೆದ Walk-in to VIDVATH, A step into success ಎಂಬ ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜನ್ಮಕೊಟ್ಟ ತಂದೆತಾಯಿ ಹಾಗೂ ವಿದ್ಯೆಕೊಟ್ಟ ಗುರು ದೇವರಿಗೆ ಸಮಾನ. ವಿದ್ವತ್ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಂತವರನ್ನು ಕರೆಸಿ ಕಾರ್ಯಕ್ರಮ ಲೋಕಾರ್ಪಣೆ ಮಾಡಿರುವುದು ನಿಜಕ್ಕೂ ಅರ್ಥಪೂರ್ಣ. ಹಾಗೂ ಭಾಗ್ಯ ಎಂದು ಹೇಳಬಹುದು. ಮೊದಲ ಬಾರಿಯ ಫಲಿತಾಂಶಕ್ಕೆ ವಿದ್ವತ್ ಶಿಕ್ಷಣ ಸಂಸ್ಥೆ ಕಾತುರದಲ್ಲಿದೆ. ಬರುವ ಹತ್ತು ವರ್ಷದಲ್ಲಿ ವಿದ್ವತ್ ಕಾಲೇಜು ರಾಜ್ಯದಲ್ಲೇ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆಯಲಿದೆ ಎಂಬ ವಿಶ್ವಾಸ ನನಗಿದೆ. ನಮ್ಮ ಶಿಕ್ಷರು ಯಾರು ವೈದ್ಯರಲ್ಲ, ಇಂಜಿನಿಯರ್ ಗಳಲ್ಲ, ಆದರೆ ಅವರೆಲ್ಲರನ್ನು ಸೃಷ್ಟಿ ಮಾಡುವ ಮಹಾತ್ಮರು. ಹಾಗಾಗಿ ನೀವು ಪಡೆದ ಶಿಕ್ಷಣ ಸಂಸ್ಥೆ ಮತ್ತು ಗುರುಗಳ ಮೇಲೆ ಅಪಾರ ಗೌರವ ಇರಲಿ ಎಂದು ಕಿವಿ ಮಾತು ಹೇಳಿದರು.

*ಶಿಕ್ಷಣ ಪಡೆದ ಸಂಸ್ಥೆಗೆ ಕೀರ್ತಿ ತನ್ನಿ:
ವಾಕ್ ಇನ್ ಟು ವಿದ್ವತ್, ಎ ಸ್ಟೆಪ್ ಇನ್ ಟು ಸಕ್ಸಸ್ ನಾಮಫಲಕ ಅನಾವರಣ ಮಾಡಿದ ಪದ್ಮಶ್ರೀ ಹರೇಕಳ ಹಾಜಬ್ಬ ಅವರು ಮಾತನಾಡಿ, ಬಡತನವಾದ್ದರಿಂದ ನಾನು ಶಿಕ್ಷಣದಿಂದ ವಂಚಿತನಾದೆ. ಆದರೆ ಅದರಿಂದ ನಾನು ಪಟ್ಟ ಕಷ್ಟ ಬೇರೊಬ್ಬರು ಪಡಬಾರದು ಎಂಬ ನೆಲೆಯಲ್ಲಿ ನನ್ನೂರಲ್ಲಿ ಸರಕಾರಿ ಶಾಲೆ ತೆರೆಯುವ ಕನಸು ಕಂಡೆ. ಈ ಅಭಿಲಾಷೆ ಹೆಮ್ಮರವಾಗಿ ಬೆಳೆಯಿತು. ಅದನ್ನು ಮಾಧ್ಯಮಗಳು ಗುರುತಿಸಿದ್ದರಿಂದ ಈ ಬಡವನಿಗೆ ಇಂದು ಪದ್ಮಶ್ರೀ ಪ್ರಶಸ್ತಿ ಬರುವಂತಾಗಿದೆ. ಹಾಗಾಗಿ ನಾನು ವಿದ್ಯಾರ್ಥಿಗಳಿಗೆ ಕೈಮುಗಿದು ನಮಿಸುವುದೇನೆಂದರೆ ಶಿಕ್ಷಣ ಪಡೆದ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ ವಿದ್ವತ್ ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಭಾರತೀಯ ಮೂಲವಾದ ಸಂಸ್ಕೃತ ಪದದಿಂದ ವಿದ್ವತ್ ಎಂಬ ಹೆಸರು ಇರಿಸಿದ್ದೇವೆ. ಇಂದು ಪೋಷಕರಲ್ಲಿ ತಮ್ಮ ಮಕ್ಕಳು ಏನು ಮಾಡಬೇಕೆಂಬ ಬಗ್ಗೆ ದೂರದೃಷ್ಟಿ ಆಲೋಚನೆಗಳಿಲ್ಲದೆ ಪರಿತಪಿಸುತ್ತಾರೆ. ಈ ನಿಟ್ಟಿನಲ್ಲಿ ವಿದ್ವತ್ ಕಾಲೇಜು ವಿದ್ವಾರ್ಥಿಗಳ ವಿವೇಚನೆಗಾಗಿ ಉಚಿತ ಶೈಕ್ಷಣಿಕ ಸಮಾಲೋಚನೆ ಹಾಗೂ ವೃತ್ತಿ ಮಾರ್ಗದರ್ಶನ ಪರಿಚಯಿಸಿದ್ದೇವೆ. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಇದರ ಗಂಭೀರತೆ ಪೋಷಕರಿಗೂ ಅರಿವಿರಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.

ಕಾಲೇಜಿನ ಭೌತಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿದ ಬೆಳ್ತಂಗಡಿ ಸಿರೋ ಮಲಬಾರ್ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ಪ್ರಧಾನ ಗುರುಗಳಾದ ಫಾ.ಜೋಸೆಫ್ ವಲಿಯಪರಂಬಿಲ್ ಮಾತನಾಡಿ, ಇಲ್ಲಿ ಯುವ ಪೀಳಿಗೆ ಬೆರೆತುಕೊಳ್ಳಲು ಉತ್ತಮ ಅವಕಾಶವನ್ನು ವಿದ್ವತ್ ಕಾಲೇಜು ಪರಿಚಯಿಸಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಅವರ ಭವಿಷ್ಯ ರೂಪಿಸುವ ದೂರದೃಷ್ಟಿ ಚಿಂತನೆಗೆ ಕಾಲೇಜನ್ನು ಅಭಿನಂದಿಸುತ್ತೇನೆ. ವಿದ್ಯಾರ್ಥಿಗಳು ಈ ಸೌಲಭ್ಯ ಬಳಸಿಕೊಳ್ಳಿ, ಪ್ರಾಮಾಣಿಕವಾಗಿ ಸಕಾರಾತ್ಮಕ ಜ್ಞಾನ ಸಂಪಾದಿಸಿ, ಸಮರ್ಪಣೆಯೊಂದಿಗೆ ಪರಿಶ್ರಮಿಸಿ, ಮೌಲ್ಯಗಳೊಂದಿಗೆ ಬೆಳೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮಾನವರಾಗಿ ಎಂದು ಸಂದೇಶ ನೀಡಿದರು.

ರಸಾಯನಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮಾತನಾಡಿ, ನಾವು ಬೇರೆಯವರೊಂದಿಗೆ ನಮ್ಮನ್ನು ತುಲನೆ ಮಾಡಬಾರದು. ವಿಜ್ಞಾನ ಇರುವುದು ಕಲಿಯಲು ಅಲ್ಲ, ಹೊರತಾಗಿ ಅವಿಷ್ಕರಿಸಲು. ಅವಿಷ್ಕರಿಸುವವರು ಬೆಳೆಯುತ್ತಾರೆ. ನಿಮ್ಮ ಆಲೋಚನಾ ಲಹರಿಯನ್ನು ವಿಸ್ತರಿಸಿ ಎಂದು ಕರೆ ನೀಡಿದರು.

ಜೀವಶಾಸ್ತ್ರ ಪ್ರಯೋಗಾಲಯ ಉದ್ಘಾಟಿಸಿದ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ಹಿಂದೆ ರಾತ್ರಿ ಶಾಲೆಯಲ್ಲಿ ಕಲಿತು ಶಿಕ್ಷಣ ಪಡೆಯುತ್ತಿದ್ದರು. ಆದರೆ ಇಂದು ಉತ್ತಮ ಅಂಕಗಳಿಸಲು ರಾತ್ರಿ ಹಗಲು ಎನ್ನದೆ ಶಿಕ್ಷಣ ಪಡೆಯಬೇಕಿದೆ. ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಪ್ರತಿಭಾ ಪುರಸ್ಕಾರವಾಗಿ ಲ್ಯಾಪ್ ಟಾಪ್, ಟ್ಯಾಬ್: ವಿದ್ವತ್ ಪ್ರತಿಭಾನ್ವೇಷಣೆ ಎಂಬ ಕಾರ್ಯಕ್ರಮದಡಿ ಕರ್ನಾಟಕ ರಾಜ್ಯದ ಎಲ್ಲೆಡೆಯಿಂದ ಆಗಮಿಸುವ 10ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪರೀಕ್ಷೆ” ಬರೆಯುವ ಅವಕಾಶವನ್ನು ವಿದ್ವತ್ ಎಜುಕೇಶನ್ ಫೌಂಡೇಶನ್ ನೀಡಲಿದೆ. ಈ ಪರೀಕ್ಷೆಯಲ್ಲಿ ಅಗ್ರ ಕ್ರಮಾಂಕದಲ್ಲಿ ಗುರುತಿಸಿರುವ ವಿದ್ಯಾರ್ಥಿಗೆ “ಲ್ಯಾಪ್ಟಾಪ್” ಮತ್ತು ಇತರ ಪ್ರತಿಭಾನ್ವಿತ 10 ವಿದ್ಯಾರ್ಥಿಗಳಿಗೆ “ಟ್ಯಾಬ್” ನ್ನು ವಿಶೇಷ ಬಹುಮಾನವಾಗಿ ನೀಡಲಿದೆ. ಹಾಗೂ ಟ್ಯಾಲೆಂಟ್ ಟೆಸ್ಟ್ ಅಥವಾ ಪ್ರತಿಭಾ ಪರೀಕ್ಷೆಯಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಅವರ ಅಂಕಗಳಿಕೆಗನುಗುಣವಾಗಿ ಕಾಲೇಜು ಶುಲ್ಕದಲ್ಲಿ ವಿಶೇಷ ರಿಯಾಯಿತಿಯನ್ನು ಒದಗಿಸಲಾಗುತ್ತದೆ ಎಂದು ಸಂಸ್ಥೆ ಅಧ್ಯಕ್ಷರಾದ ಶುಭಾಶ್ಚಂದ್ರ ಶೆಟ್ಟಿ ತಿಳಿಸಿದರು.

ವಿಶೇಷ ಆಹ್ವಾನಿತರಾದ ಪದ್ಮಶ್ರೀ, ಶಿಕ್ಷಣ ಸಂತ ಹರೇಕಳ ಹಾಜಬ್ಬ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರನ್ನು ಕಾಲೇಜು ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ಉಚಿತ ಶೈಕ್ಷಣಿಕ ಸಮಾಲೋಚನೆಯಲ್ಲಿ ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡುವ ಟಿ.ಶರ್ಟ್ ನ್ನು ಸಂಸ್ಥೆಯ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಅನಾವರಣ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ವತ್ ಕಾಲೇಜು ಕಾರ್ಯದರ್ಶಿ ಪ್ರಜ್ವಲ್ ರೈ, ಟ್ರಸ್ಟಿಗಳಾದ ಎಂ.ಕೆ.ಕಾಶಿನಾತ್, ಸುಚಿತ್ರಾ ಶೆಟ್ಟಿ, ರೇಶ್ಮಾ ಸುಭಾಶ್ಚಂದ್ರ ಶೆಟ್ಟಿ, ಆಡಳಿತಾಧಿಕಾರಿ ಅಶೋಕ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಶೈಕ್ಷಣಿಕ ನಿರ್ದೇಶಕ ಗಂಗಾಧ ಇ ಮಂಡಗಳಲೆ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರತಾಪ್ ಬಾಬು ಡಿ.ಎಂ. ಪ್ರಾಸ್ತಾವಿಸಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲರಾದ ಹರೀಶ್ ಕೆ.ಆರ್. ವಂದಿಸಿದರು. ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿಗಳ ಸಂದೇಶ ಪತ್ರವನ್ನು ಪಿ.ಆರ್.ಒ. ಚೈತ್ರೇಶ್ ಸಿ. ವಾಚಿಸಿದರು‌.

Share News
Exit mobile version