ಮಂಜೇಶ್ವರ: ಮಂಜೇಶ್ವರದ ವರ್ಕಾಡಿಯ ಯೇಸುಕ್ರಿಸ್ತರ ತಿರು ಹೃದಯದ ದೇವಾಲಯದಲ್ಲಿ ನಡೆದ ವೆಲಂಕಣಿ ಮಾತೆಯ 35ನೇ ವಾರ್ಷಿಕ ಮಹೋತ್ಸವ ಸಂಭ್ರಮ ನಡೆಯಿತು. ಈ ಬಲಿಪೂಜೆಯಲ್ಲಿ ಬೆಂಗಳೂರಿನ ನಿವೃತ್ತ ಆರ್ಚ್ ಬಿಷಪ್ ಅ.ವಂ. ಡಾ. ಬರ್ನಾಡ್ ಮೊರಾಸ್ ಅವರು ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿದರು.

ನಂತರ ನಡೆದ ಪ್ರಬೋಧನೆಯಲ್ಲಿ “ವೆಲಂಕಣಿ ಮಾತೆ ಯೇಸುಕ್ರಿಸ್ತರ ಮಾತೆ ಹೇಗೋ ನಮ್ಮ ಮಾತೆಯೂ ಹೌದು”. ತಮಿಳುನಾಡಿನ ವೆಲಂಕಣಿಯಲ್ಲಿ ಕ್ರಿ.ಶ 1570 ಇಸವಿಯಲ್ಲಿ ಬಾಲಕನೊಬ್ಬನಿಗೆ ಕಾಣಿಸಿಕೊಂಡು ಪವಾಡಗಳನ್ನು ಸೃಷ್ಟಿಸಿ ಪ್ರಸಿದ್ಧಿ ಹೊಂದಿದರು. ಇದರಿಂದ ಆಕೆಗೆ ವೆಲಂಕಣಿ ಮಾತೆ ಎಂಬ ಹೆಸರು ಬಂತು. ಇಂದು ಆಕೆ ದಕ್ಷಿಣ ಭಾರತದ ಪ್ರೀತಿಯ ಮಾತೆಯಾದರು. ಇಂದು ಅಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದಾರೆ.

ಕಳೆದ 35 ವರ್ಷದ ಹಿಂದೆ ವರ್ಕಾಡಿಯಲ್ಲಿ ಮಾಡಿದ ಪವಾಡದಿಂದ ಆಕೆಯನ್ನು ಸ್ತುತಿಸುವ ಕಾರ್ಯ ಆರಂಭವಾಯಿತು. ಅಂದಿನಿಂದ ಹಲವರಿಗೆ ಆರೋಗ್ಯ, ಮಾನಸಿಕ ನೆಮ್ಮದಿಯನ್ನು ನೀಡಿದ್ದಾರೆ.

ಆಕೆ ನಾವು ಬೇಡಿದ್ದನ್ನು ಕೊಡುವ ದೇವತೆಯೂ ಹೌದು. ಮೇರಿ ಮಾತೆಗೂ ತನ್ನ ಜೀವಿತಾವಧಿಯ ಆರಂಭದಿಂದ ಕೊನೆಯವರೆಗೂ ಕಷ್ಟಗಳೂ ಇದ್ದವು ಆದರೆ ಆಕೆ ದೇವರ ಮೇಲಿದ್ದ ಭರವಸೆ ಕಳೆದುಕೊಳ್ಳಲಿಲ್ಲ. ಅದರಂತೆ ನಾವೂ ಬದುಕಲು ಪ್ರಯತ್ನಿಸಬೇಕು ಎಂದರು.

ಬಲಿಪೂಜೆಯಲ್ಲಿ ವರ್ಕಾಡಿ ಚರ್ಚ್‌ನ ಧರ್ಮಗುರು ಬಾಜಿಲ್ ವಾಜ್ ಸೇರಿದಂತೆ ಹಲವು ಧರ್ಮಗುರುಗಳು ಭಾಗವಹಿಸಿದ್ದರು. ಧರ್ಮಭಗಿನಿಯರು ಸಹಕರಿಸಿದರು.

ಬಲಿಪೂಜೆಯಲ್ಲಿ ಅಸಂಖ್ಯಾತ ಮಂದಿ ಭಕ್ತರು ಭಾಗವಹಿಸಿದರು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಇದೇ ವೇಳೆ ಹಲವರು ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥಿಸಿದರೆ ಮತ್ತೆ ಕೆಲವರು ಮೇಣದ ಬತ್ತಿ ಹಚ್ಚುವ ಮೂಲಕ ಹರಕೆ ಅರ್ಪಣೆ ಮಾಡಿದರು.


