canaratvnews

*ಪೆರುವಾಯಿಯಲ್ಲಿ ಅಭಯ ಸಂಜೀವಿನಿ ಒಕ್ಕೂಟದ ಮಹಿಳೆಯರ ಹೊಲಿಗೆ ತರಬೇತಿ ಸಮಾರೋಪ*

ವಿಟ್ಲ:ಪೆರುವಾಯಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಏಪ್ರಿಲ್ 04ರಂದು ಸ್ವಸಹಾಯ ಸಂಘದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ 60 ದಿನಗಳ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮವನ್ನು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ), ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ್, ಪೆರುವಾಯಿ ಗ್ರಾಮ ಪಂಚಾಯತ್ ಹಾಗೂ ಅಭಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಸಂಯುಕ್ತವಾಗಿ ಹಮ್ಮಿಕೊಂಡಿದ್ದವು.

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿರಾಜ್ ಮಾತನಾಡಿ, “ತರಬೇತಿ ಪಡೆದ ಮಹಿಳೆಯರು ಕೇವಲ ಕಲಿಯುವುದಷ್ಟೇ ಅಲ್ಲದೆ, ಮುದ್ರಾ ಲೋನ್ ಸೇರಿದಂತೆ ವಿವಿಧ ಬ್ಯಾಂಕ್ ಸೌಲಭ್ಯಗಳನ್ನು ಬಳಸಿಕೊಂಡು ಸ್ವಉದ್ಯೋಗ ಆರಂಭಿಸಬೇಕು,” ಎಂದು ಕರೆ ನೀಡಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಮಾತನಾಡಿ, ಮಹಿಳೆಯರು ತಮ್ಮ ಕೌಶಲ್ಯದ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಆಶಿಸಿದರು. ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಅವರು ಮಾತನಾಡಿ, ಆರ್ಥಿಕ ಸಬಲೀಕರಣದ ಜೊತೆಗೆ ಪ್ಲಾಸ್ಟಿಕ್ ಮುಕ್ತ ಪಂಚಾಯತ್ ನಿರ್ಮಾಣಕ್ಕೆ ಮಹಿಳೆಯರು ಸಹಕರಿಸಬೇಕು ಎಂದರು.

ವೇದಿಕೆಯಲ್ಲಿ NRLM ವಲಯ ಮೇಲ್ವಿಚಾರಕಿ ಕುಸುಮ ಹಾಗೂ ಒಕ್ಕೂಟದ ಅಧ್ಯಕ್ಷೆ ಸೂರ್ಯಪ್ರಭ ಉಪಸ್ಥಿತರಿದ್ದರು. ಪೆರುವಾಯಿ ಪಂಚಾಯತ್ ವ್ಯಾಪ್ತಿಯ 25 ಮಹಿಳೆಯರು ತರಬೇತಿ ಪೂರ್ಣಗೊಳಿಸಿ ಪ್ರಮಾಣಪತ್ರ ಸ್ವೀಕರಿಸಿದರು.

ಕುಮಾರಿ ಸಾನ್ವಿ ಪ್ರಾರ್ಥಿಸಿದರು, ಶ್ರೀಮತಿ ಬೇಬಿ ಸ್ವಾಗತಿಸಿದರು, ಶ್ರೀಮತಿ ಲೀನಾ ಲೋಬೊ ಕಾರ್ಯಕ್ರಮ ನಿರೂಪಿಸಿದರು ಮತ್ತು ಶ್ರೀಮತಿ ಮಂಜುಳಾ ವಂದಿಸಿದರು

Share News
Exit mobile version