ಮಂಗಳೂರು: ನಗರದ ವಿ. ಟಿ. ರಸ್ತೆಯಲ್ಲಿರುವ ಶ್ರೀ ಕೃಷ್ಣ ಮಂದಿರದಲ್ಲಿ ವಿ.ಟಿ. ರೋಡ್ ಬಾಲಕ ವೃಂದ (ರಿ) ಆಶ್ರಯದಲ್ಲಿ 27 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವೈಭವಯುತವಾಗಿ ಆಚರಿಸಲಾಯಿತು. ಸೆಪ್ಟೆಂಬರ್ 29 ರಂದು ಶ್ರೀ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಯಿತು. ಮೂರು ದಿನಗಳ ತನಕ ನಡೆದ ಕಾರ್ಯಕ್ರಮದಲ್ಲಿ ವಿಶೇಷ ದೀಪಾಂಲಕಾರ ಸಹಿತ ವಿವಿಧ ಕಾರ್ಯಕ್ರಮಗಳು ನಡೆದವು.
ಸೆಪ್ಟೆಂಬರ್ 30 ರಂದು ಸಂಜೆ ಮಹರ್ಷಿ ವಾಣಿ ಖ್ಯಾತಿಯ ಬ್ರಹ್ಮರ್ಷಿ ಆನಂದ ಸಿದ್ದಿ ಪೀಠಂನ ಮಹರ್ಷಿ ಆನಂದ ಗುರೂಜಿ ಸಪತ್ನೀಕರಾಗಿ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಇದೇ ಹೊತ್ತಿನಲ್ಲಿ ದೀಪಾಲಂಕಾರದ ವೈಭವವನ್ನು ಕಣ್ತುಂಬಿಕೊಂಡ ಗುರೂಜಿಯವರು ಯುವಕರ ಒಗ್ಗಟ್ಟು, ತನ್ಮಯತೆ ಮತ್ತು ಗುರುಹಿರಿಯರ ಮೇಲಿನ ಭಕ್ತಿಯನ್ನು ಶ್ಲಾಘಿಸಿದರು. ಮುಂದಿನ ವರ್ಷಗಳಲ್ಲಿ ಈ ಶಾರದಾ ಮಹೋತ್ಸವ ಇನ್ನಷ್ಟು ವೈಭವದಿಂದ ನಡೆಯುವಂತಾಗಲಿ ಎಂದು ಹಾರೈಸಿದರು. ಬಾಲಕ ವೃಂದದ ಪ್ರಮುಖರು, ಗಣ್ಯರು, ಭಕ್ತರು ಉಪಸ್ಥಿತರಿದ್ದರು. ಅಕ್ಟೋಬರ್ 1 ರಂದು ಶಾರದಾ ಮಾತೆಯ ವಿಗ್ರಹವನ್ನು ಶೋಭಾಯಾತ್ರೆಯ ಮೂಲಕ ಮಹಾಮಾಯಾ ದೇವಳದ ಕೆರೆಯಲ್ಲಿ ಜಲಸ್ತಂಭನಗೊಳಿಸಲಾಯಿತು.