ಉಳ್ಳಾಲ, ಮೇ 31: ಭಾರೀ ಮಳೆಗೆ ತತ್ತರಿಸಿದ್ದ ಉಳ್ಳಾಲ ತಾಲೂಕಿನಲ್ಲಿ ಒಂದೇ ದಿನ ಮೂವರು ಪುಟ್ಟ ಕಂದಮ್ಮಗಳು ಜೀವ ತೆತ್ತಿವೆ. ಈ ಪೈಕಿ ಇಬ್ಬರು ಹಿಂದೂ ಧರ್ಮಕ್ಕೆ ಸೇರಿದ್ದರೆ ಮತ್ತೊಬ್ಬಾಕೆ ಮುಸ್ಲಿಂ ಸಮುದಾಯದ ಬಾಲಕಿ. ಈ ಮೂವರಿಗೂ ತಾವು ಧರ್ಮದ ಮಿತಿಯೊಳಗೆ ಅವಿತುಕೊಂಡಿದ್ದೇವೆ ಅನ್ನೋ ಅರಿವು ಇಲ್ಲದ ಪ್ರಾಯವದು. ಬಾಳಿ ಬದುಕಬೇಕಿದ್ದ ಕಂದಮ್ಮಗಳು ಮಣ್ಣಿನಡಿ ಸಿಲುಕಿ ನರಳಿ ನರಳಿ ಪ್ರಾಣ ಅರ್ಪಿಸಿವೆ. ಆದರೆ ಆ ಕಂದಮ್ಮಗಳ ರಕ್ಷಣೆಗೆ ಯಾವುದೇ ಸಂಘಟನೆಗಳು ಧಾವಿಸಿಲ್ಲ. ಯಾವುದೇ ಪಕ್ಷದ ಕಾರ್ಯಕರ್ತರು ಬಂದಿಲ್ಲ.

ಮಕ್ಕಳ ಧರ್ಮ ಯಾವುದು ಎಂದು ಕೇಳದೇ ರಕ್ಷಣಾ ಕಾರ್ಯ
ಮಕ್ಕಳ ರಕ್ಷಣೆಗೆ ನಾ ಮುಂದು ತಾ ಮುಂದು ಎಂದು ಕೈ ಜೋಡಿಸಿದ್ದು, ಸ್ಥಳೀಯ ಯುವಕರು. ಅವರ್ಯಾರು ಮಕ್ಕಳ ಜಾತಿ, ಧರ್ಮ ಯಾವುದು ಎಂದು ಕೇಳಲಿಲ್ಲ. ಮನುಷ್ಯರಾಗಿ ಹುಟ್ಟಿದ್ದೇವೆ. ಎಲ್ಲರ ಧರ್ಮ ಮನುಷ್ಯ ಧರ್ಮ. ಎಲ್ಲರೂ ನಮ್ಮವರು. ನಮ್ಮದೇ ಅಣ್ಣ ತಮ್ಮ ಅಕ್ಕ ತಂಗಿ ಎಂದು ರಕ್ಷಣೆಗೆ ಧಾವಿಸಿದರು. ಅಲ್ಲಿ ಮಾಧವಣ್ಣ, ಶರತ್, ಸತೀಶಣ್ಣ ಇದ್ದರು. ಜತೆಯಲ್ಲೇ ಆಸಿಫ್, ಕರೀಂ ಬಾಯಿ, ಇಬ್ರಾಹಿಂ ಇದ್ದರು. ಆವರ್ಯಾರು ಇವುಗಳು ಹಿಂದೂ ಮಕ್ಕಳು. ಇದು ಮುಸ್ಲಿಂ ಬಾಲಕಿ. ನೀವು ಬರುವುದು ಬೇಡ, ನಾವೇ ನೋಡ್ತೇವೆ ಎಂದು ಹೇಳಲಿಲ್ಲ. ಅಥವಾ ಹಿಂದೂ ಮಕ್ಕಳ ರಕ್ಷಣೆಗೆ ನಾವು ಹೋಗಲ್ಲ ಎಂದು ಮುಸ್ಲಿಂ ಸಹೋದರರು ಹೇಳಿಲ್ಲ. ಮುಸ್ಲಿಂ ಬಾಲಕಿಯ ನೆರವಿಗೆ ನಾವು ಹೋಗಲ್ಲವೆಂದು ಯಾವೊಬ್ಬ ಹಿಂದೂ ಸಹೋದರ ಹೇಳಿದ್ದಿಲ್ಲ. ಎಲ್ಲರೂ ನಮ್ಮವರು. ನಾವೇ ನಿಮ್ಮ ಸಹೋದರರು ಎಂದು ರಕ್ಷಣೆಯಲ್ಲಿ ತೊಡಗಿದ್ದರು.
ಧರ್ಮದ ವಿಷಖಾರುವರು ಎಲ್ಲಿ ಸತ್ತೋದರು?
ಮಾತೆತ್ತಿದರೆ ನಾವು ಹಿಂದೂಗಳು, ನಾವು ಮುಸಲ್ಮಾನರು. ಬೇರೆ ಧರ್ಮದವರನ್ನು ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎನ್ನುವ ವಿಷ ಖಾರುವವರು ಎಲ್ಲಿ ಸತ್ತು ಹೋದರು ಎಂದು ಶತಾಯಗತಾಯ ಪ್ರಯತ್ನಿಸಿದ ಬಳಿಕವೂ ಮಕ್ಕಳನ್ನು ರಕ್ಷಿಸಲು ಆಗದಿದ್ದಾಗ ಸ್ಥಳದಲ್ಲಿದ್ದ ಮುಸ್ಲಿಂ ಹಿಂದೂ ಯುವಕರ ಪ್ರಶ್ನೆಯಾಗಿತ್ತು. ನೀವು ವೇದಿಕೆಯ ಮೇಲೇರಿ ಧ್ವೇಷದ ಭಾಷಣ ಮಾಡಿ ಜನರನ್ನು ದೂರ ಮಾಡುವ ಕೆಲಸ ಮಾಡುತ್ತೀರಿ. ಸೌಹಾರ್ದ ಸಮಾಜವನ್ನು ಒಡೆದು ಯಾರ್ಯರ ಜೀವ ಬಲಿ ಪಡೆಯುತ್ತೀರಿ. ಆದರೆ ನಿಮ್ಮಿಂದ ನಿಮ್ಮವರ ರಕ್ಷಣೆ ಸಾಧ್ಯವಾಗುವುದಿಲ್ಲ. ಜನರನ್ನು ಒಡೆದು ಜೀವ ಬಲಿಪಡೆಯುವುದೇ ನಾಯಕರ ನಾಲಯಕ್ ಕೆಲಸ ಅನ್ನೋ ಆಕ್ರೋಶ ವ್ಯಕ್ತವಾಯಿತು.
ಕೊಲೆಯಾದಾಗ ಮೆರವಣಿಗೆ ಬಂದ್! ಮಕ್ಕಳ ಸಾವಿಗೆ?
ವಾರದ ಹಿಂದೆ ಜಿಲ್ಲೆಯನ್ನು ನಲುಗಿಸಿದ್ದ ಮೂರು ಕೊಲೆ ಪ್ರಕರಣಗಳು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿತ್ತು. ಟಾರ್ಗೆಟ್ ರೀತಿಯಲ್ಲಿ ಒಬ್ಬೊಬ್ಬರನ್ನೇ ಬಲಿಪಡೆಯಲಾಯಿತು. ಸತ್ತವರ ಪರವಾಗಿ ಹೋರಾಟಗಳು ನಡೆದವು. ಬಂದ್ ಮಾಡಲಾಯಿತು. ಬಸ್ ಗಳಿಗೆ ಕಲ್ಲು ಹೊಡೆಯಲಾಯಿತು. ಮೆರವಣಿಗೆ ಮಾಡಲಾಯಿತು. ಆದರೆ ಅದೇ ಮೂವರು ಮಕ್ಕಳು ಪ್ರಾಣ ಬಿಟ್ಟಾಗ? ಮೆರವಣಿಗೆ ಎಲ್ಲಿ? ಬಂದ್ ಎಲ್ಲಿ? ನಾಯಕರೆಲ್ಲಿ? ಸುಹಾಸ್ ಶೆಟ್ಟಿ ಹಿಂದೆ ಇದ್ದ ಸಮುದಾಯ ಆರ್ಯನ್ ಆಯುಶ್ ಹಿಂದೆ ಬರಲೇ ಇಲ್ಲ. ರಹೀಂ ಹಿಂದಿದ್ದ ಸಮುದಾಯ ನಯೀಮಾ ಕುಟುಂಬಕ್ಕೆ ಸಾಂತ್ವಾನ ಹೇಳಲು ಬರಲೇ ಇಲ್ಲ.
ಎಲ್ಲಿ ಹೋದವು ಹಿಂದೂ, ಮುಸ್ಲಿಂ ಸಂಘಟನೆಗಳು:
ದ.ಕ. ಜಿಲ್ಲೆಯನ್ನು ಪ್ರಸ್ತುತ ಆಳ್ವಿಕೆ ನಡೆಸುತ್ತಿರುವುದು ಇಲ್ಲಿರುವ ಸಂಘಟನೆಗಳು. ಅಧಿಕಾರಿಗಳು ಹಾಗೂ ಸರಕಾರ ಹೆಸರಿಗೆ ಮಾತ್ರ. ಒಂದೊಮ್ಮೆ ಸರಕಾರ ಅಧಿಲಾರಿಗಳದ್ದು ನಡೆಯುತ್ತೇ ಎಂದಾಗಿದ್ದಿದ್ದರೆ ಇಲ್ಲಿ ಸರಣಿ ಕೊಲೆಗಳಿಗೆ ಎಡೆ ಇರುತ್ತಿರಲಿಲ್ಲ. ಅಮಾಯಕರು ಸಾಯುತ್ತಿರಲಿಲ್ಲ. ಬಂದ್ ಆಗುತ್ತಿರಲಿಲ್ಲ. ಆದರೆ ಧರ್ಮದ ಅಮಲಿನ ಶಕ್ತಿಗಳು ಜಿಲ್ಲೆಯಲ್ಲಿ ಭದ್ರವಾಗಿ ಬೇರೂರಿವೆ. ಅದೇ ಸಂಘಟನೆಗಳಿಗೆ ತಮ್ಮದೇ ಧರ್ಮದ ಮಕ್ಕಳು ಬೇಡವಾದರು. ಮಣ್ಣಿನಡಿಯಲ್ಲಿ ನರಲಾಡುತ್ತಿದ್ದರೂ ಅವರ ರಕ್ಷಣೆಗೆ ಈ ಅಫೀಮುಗಳಿಗೆ ಕಾಣಿಸಲಿಲ್ಲ. ಟಿವಿ, ಮೊಬೈಲ್ ಗಳಲ್ಲಿ ವೀಡಿಯೋ ನೋಡಿದ್ದು ಬಿಟ್ಟರೆ ಯೋಧರಾಗಿ ಬಂದವರಿಲ್ಲ.
ನಮಾಜ್ ಗೆ ಹೋಗಲ್ಲ ಮಕ್ಕಳೇ ಎಲ್ಲ!
ಮುಸ್ಲಿಮರು ಶುಕ್ರವಾರದ ನಮಾಜ್ ತಪ್ಪಿಸುವವರಲ್ಲ. ತಪ್ಪಿಸುವಂತೆಯೂ ಇಲ್ಲ. ಆದರೆ ಶುಕ್ರವಾರ ಮಕ್ಕಳೇ ಎಲ್ಲಾ ಎಂದು ಮುಸಲ್ಮಾನ ಬಾಂಧವರು ರಕ್ಷಣೆಯಲ್ಲಿ ತೊಡಗಿದ್ದರು. ಮಸೀದಿಗೆ ತೆರಳದೆ ರಕ್ಷಣೆಗೆ ನೆರವಾದರು.
ಸೌಹಾರ್ದತೆ ಮಾನವೀಯತೆ ಅಳಿಸಲು ಅಸಾಧ್ಯ
ಒಂದೆಡೆ ಧ್ವೇಷ ಕಾರುವ ನಾಯಕರು ನಿರಂತರ ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಶೇ. ೯೦ರಷ್ಟು ಜನ ಸೌಹಾರ್ದತೆ ಕಾಪಾಡಿಕೊಂಡಿದ್ದಾರೆ. ಅದರಿಂದಾಗಿಯೇವಿಂದಿಗೂ ಮಾನವೀಯತೆ ಜೀವಂತವಾಗಿದೆ. ಜೀವಗಳಿಗಾಗಿ ಮತ್ತೊಂದು ಜೀವಗಳು ಮಿಡಿಯುತ್ತಿರುತ್ತವೆ. ಇದಕ್ಕೆ ಉಳ್ಳಾಲದ ಘಟನೆಗಳೇ ಸಾಕ್ಷಿ ನುಡಿಯುತ್ತಿವೆ.