ಮಂಗಳೂರು. ಮಾ 11 :ಅಮೇರಿಕಾ ಇಸ್ರೇಲ್ ನ ಯುದ್ದಕೋರ ನೀತಿಗಳಿಂದಾಗಿ ಜಗತ್ತಿನೆಲ್ಲಡೆ ಯುದ್ಧದ ಕಾರ್ಮೋಡ ಕವಿದಿದ್ದು,ಜನಸಾಮಾನ್ಯರು ತೀವ್ರ ಆತಂಕದಲ್ಲಿದ್ದಾರೆ.ಅಮೇರಿಕನ್ ಸಾಮ್ರಾಜ್ಯಶಾಹಿ ರಾಷ್ಟಗಳು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು,ಅದನ್ನು ಸಮದೂಗಿಸಲು ಪ್ರತೀ ಸಂದರ್ಭದಲ್ಲೂ ಯುದ್ದವನ್ನೇ ಅಸ್ತ್ರವನ್ನಾಗಿಸಿದೆ.ಇದರಿಂದಾಗಿ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು ದುಡಿಯುವ ವರ್ಗದ ಬದುಕು ಸಂಕಷ್ಟಕ್ಕೀಡಾಗಿದೆ. ಈ ಮೂಲಕ ಅಮೇರಿಕಾದ ಯುದ್ದಕೋರ ನೀತಿಗಳು ದುಡಿಯುವ ವರ್ಗಕ್ಕೆ ಮಾರಕವಾಗಿ ಪರಿಣಮಿಸಿದೆ* ಎಂದು CITU ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಕೆ ಮಹಾಂತೇಶ್ ರವರು ಅಭಿಪ್ರಾಯಪಟ್ಟರು.

CITU ಕರ್ನಾಟಕ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರ ಎಪ್ರಿಲ್ 4 ಮತ್ತು 5 ರಂದು ಎರಡು ದಿನಗಳ ಕಾಲ ಮಂಗಳೂರಿನಲ್ಲಿ ನಡೆಯಲಿದ್ದು,ಅದರ ಯಶಸ್ವಿಗಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು. *ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ಹೊರಟಿರುವ ಕೇಂದ್ರ ಸರಕಾರದ ವಿರುದ್ದ ಸಂಸತ್ತಿನೊಳಗೆ ಪ್ರತಿಭಟನೆಯ ನಾಟಕವಾಡಿದ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದು, ಸಂಹಿತೆಗಳ ವಿರುದ್ಧ ನಿಲ್ಲಬೇಕಾಗಿತ್ತು.ಆದರೆ ಅದೇ ಕಾರ್ಮಿಕ ವಿರೋಧಿ ಸಂಹಿತೆಗಳಿಗೆ ಪೂರಕವಾಗಿ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ರೀತಿಯಲ್ಲಿ ನಿಯಮಾವಳಿಗಳನ್ನು ರೂಪಿಸಿರುವುದು ಕಾಂಗ್ರೆಸ್ ನ ದ್ವಂದ್ವ ನೀತಿಯ ದ್ಯೋತಕವಾಗಿದೆ* ಎಂದು ಕಟುವಾಗಿ ಟೀಕಿಸಿದರು.
ಸಭೆಯಲ್ಲಿ ಕಾರ್ಯಾಗಾರದ ಯಶಸ್ವಿಗಾಗಿ 101 ಮಂದಿಯನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ,ಕಾರ್ಯಾಧ್ಯಕ್ಷರಾಗಿ ಬಿ ಎಂ ಭಟ್,ಪ್ರಧಾನ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಬಜಾಲ್, ಖಜಾಂಚಿಯಾಗಿ ಯೋಗೀಶ್ ಜಪ್ಪಿನಮೊಗರುರವರನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ CITU ದ.ಕ.ಜಿಲ್ಲಾಧ್ಯಕ್ಷರಾದ ಬಿ ಎಂ ಭಟ್ ರವರು ಮಾತನಾಡಿ, *ಆಳುವ ವರ್ಗಗಳ ಆಕ್ರಮಣಕಾರಿ ನೀತಿಗಳನ್ನು ಸಮರಶೀಲ ಹೋರಾಟಗಳ ಮೂಲಕ ಹಿಮ್ಮೆಟ್ಟಿಸಬೇಕಾದರೆ ಬಲಿಷ್ಠ ಕಾರ್ಮಿಕ ಚಳುವಳಿಯಿಂದ ಮಾತ್ರ ಸಾಧ್ಯ.ಅಂತಹ ಚಳುವಳಿಯನ್ನು ಕಟ್ಟಲು ನಾಂದಿ ಹಾಡಬೇಕಾದ ರಾಜ್ಯ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಜನತೆ ಸಂಪೂರ್ಣ ಸಹಕಾರ ನೀಡಬೇಕೆಂದು* ವಿನಂತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಕಾರ್ಯಾಗಾರದ ಮಹತ್ವ ಹಾಗೂ ಅದನ್ನು ಯಶಸ್ವಿಗೊಳಿಸಲು ಬೇಕಾದ ತಯಾರಿಗಳ ಬಗ್ಗೆ ವಿವರಣೆಯನ್ನು ಸಭೆಗೆ ನೀಡಿದರು.ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ,ವಸಂತ ಆಚಾರಿ, ಸಂತೋಷ್ ಬಜಾಲ್,ಕೃಷ್ಣಪ್ಪ ಕೊಂಚಾಡಿ, ವಾಸುದೇವ ಉಚ್ಚಿಲ್, ಬಿ ಎಂ ಮಾಧವ,ಮುನೀರ್ ಕಾಟಿಪಳ್ಳ, ಪುರುಷೋತ್ತಮ ಪೂಜಾರಿ,ಮನೋಜ್ ವಾಮಂಜೂರು,ಯೋಗೀಶ್ ಜಪ್ಪಿನಮೊಗರು, ಫ್ಲೇವಿ ಕ್ರಾಸ್ತಾ ಅತ್ತಾವರ,ಯೋಗಿತಾ ಉಳ್ಳಾಲ, ಶೈಲೇಶ್, ರವಿಚಂದ್ರ ಕೊಂಚಾಡಿ ಮುಂತಾದವರು ಹಾಜರಿದ್ದರು.