ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆ ನಾಳೆ (ಗುರುವಾರ) ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ 30 ಕಿ.ಮೀ ನಿಂದ 40 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್ ಮತ್ತು ಗದಗ ಜಿಲ್ಲೆಯಲ್ಲಿ ಗಂಟೆಗೆ 50 ಕಿ.ಮೀನಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವವಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಬಹುದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಮತ್ತು ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಶುಕ್ರವಾರವು ಬಹುತೇಕ ಜಿಲ್ಲೆಗಳಲ್ಲಿ ಹಾಗೂ ಶನಿವಾರ ಕೆಲ ಜಿಲ್ಲೆಗಳಲ್ಲಿ ಮಳೆ ಮುಂದುವರಿಯುವ ಸಂಭವವಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳ ಅವಧಿಯಲ್ಲಿ ಗರಿಷ್ಠ ಉಷ್ಣಾಂಶವು 3ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.