• Home  
  • ತಂದೆ-ಮಗನ ಲಾಕಪ್‌ ಡೆತ್‌ ಪ್ರಕರಣ: 9 ಪೊಲೀಸರಿಗೆ ಗಲ್ಲು ಶಿಕ್ಷೆ ಪ್ರಕಟ
- HOME - LATEST NEWS - NATIONAL

ತಂದೆ-ಮಗನ ಲಾಕಪ್‌ ಡೆತ್‌ ಪ್ರಕರಣ: 9 ಪೊಲೀಸರಿಗೆ ಗಲ್ಲು ಶಿಕ್ಷೆ ಪ್ರಕಟ

ಚೆನ್ನೈ: 2020ರಲ್ಲಿ ಕೊರೊನಾ ಅವಧಿಯಲ್ಲಿ ರಾತ್ರಿಯಿಡೀ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ಅಂಗಡಿ ಮಾಲೀಕ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಸಾಥನ್‌ಕುಲಂ ಪೊಲೀಸರು ಕ್ರೂರವಾಗಿ ಥಳಿಸಿದ್ದರು. ಕಸ್ಟಡಿಯಲ್ಲಿದ್ದಾಗ ಅವರಿಗೆ ಚಿತ್ರಹಿಂಸೆ ನೀಡಿದ್ದರಿಂದ ಅವರಿಬ್ಬರೂ ಪೊಲೀಸ್ ಠಾಣೆಯಲ್ಲೇ ಮೃತಪಟ್ಟಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮಗ್ರ ತನಿಖೆ ನಡೆಸಿ 2,427 ಪುಟಗಳ ಚಾರ್ಜ್‌ಶೀಟ್ ಅನ್ನು […]

Share News

ಚೆನ್ನೈ: 2020ರಲ್ಲಿ ಕೊರೊನಾ ಅವಧಿಯಲ್ಲಿ ರಾತ್ರಿಯಿಡೀ ಅಂಗಡಿ ತೆರೆದಿದ್ದರು ಎಂಬ ಕಾರಣಕ್ಕೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂನಲ್ಲಿ ಅಂಗಡಿ ಮಾಲೀಕ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಸಾಥನ್‌ಕುಲಂ ಪೊಲೀಸರು ಕ್ರೂರವಾಗಿ ಥಳಿಸಿದ್ದರು.

ಕಸ್ಟಡಿಯಲ್ಲಿದ್ದಾಗ ಅವರಿಗೆ ಚಿತ್ರಹಿಂಸೆ ನೀಡಿದ್ದರಿಂದ ಅವರಿಬ್ಬರೂ ಪೊಲೀಸ್ ಠಾಣೆಯಲ್ಲೇ ಮೃತಪಟ್ಟಿದ್ದರು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮಗ್ರ ತನಿಖೆ ನಡೆಸಿ 2,427 ಪುಟಗಳ ಚಾರ್ಜ್‌ಶೀಟ್ ಅನ್ನು ಮಧುರೈ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಬಂಧಿತರಾದ ಎಲ್ಲಾ 9 ಪೊಲೀಸರು ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿತ್ತು. ನಿನ್ನೆ ಅವರ ಶಿಕ್ಷೆಯ ಪ್ರಮಾಣ ಪ್ರಕಟವಾಗಿದ್ದು, ಎಲ್ಲ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಈ ಘಟನೆ ನಡೆದು 6 ವರ್ಷಗಳ ವಿಚಾರಣೆಯ ನಂತರ ನಿನ್ನೆ ತೀರ್ಪು ಹೊರಬಿದ್ದಿದೆ. ವ್ಯಾಪಾರಿ ಪಿ. ಜಯರಾಜ್ (59) ಮತ್ತು ಅವರ ಮಗ ಜೆ. ಬೆನ್ನಿಕ್ಸ್ (31) ಅವರ ಸಾವಿನ ಪ್ರಕರಣದಲ್ಲಿ ಕೊಲೆ ಮತ್ತು ಸಂಬಂಧಿತ ಅಪರಾಧಗಳಲ್ಲಿ 9 ಆರೋಪಿಗಳನ್ನು ತಪ್ಪಿತಸ್ಥರೆಂದು ನ್ಯಾಯಾಧೀಶ ಜಿ ಮುತ್ತುಕುಮಾರನ್ ತೀರ್ಪು ನೀಡಿದ್ದಾರೆ.

ಕಸ್ಟಡಿಯಲ್ಲಿದ್ದಾಗ ಪೂರ್ವನಿಯೋಜಿತವಾಗಿ ಪ್ಲಾನ್ ಮಾಡಿ ರಾತ್ರಿಯಿಡೀ ಚಿತ್ರಹಿಂಸೆಯನ್ನು ನೀಡಲಾಗಿದೆ ಎಂಬ ಕೇಂದ್ರ ತನಿಖಾ ದಳದ (ಸಿಬಿಐ) ವಾದವನ್ನು ನ್ಯಾಯಾಲಯ ಸ್ವೀಕರಿಸಿದೆ. ಹೀಗಾಗಿ, ಗರಿಷ್ಠ ಶಿಕ್ಷೆಯನ್ನು ವಿಧಿಸಲಾಗಿದೆ.

ಗಲ್ಲು ಶಿಕ್ಷೆಗೊಳಗಾದವರಲ್ಲಿ ಇನ್ಸ್‌ಪೆಕ್ಟರ್ ಎಸ್. ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಪಿ. ರಘು ಗಣೇಶ್ ಮತ್ತು ಕೆ. ಬಾಲಕೃಷ್ಣನ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಎಸ್. ಮುರುಗನ್ ಮತ್ತು ಎ. ಸಮದುರೈ, ಕಾನ್‌ಸ್ಟೆಬಲ್‌ಗಳಾದ ಎಂ. ಮುತ್ತುರಾಜ್, ಎಸ್. ಚೆಲ್ಲಾದುರೈ, ಎಕ್ಸ್. ಥಾಮಸ್ ಫ್ರಾನ್ಸಿಸ್ ಮತ್ತು ಎಸ್. ವೇಲುಮುತ್ತು ಸೇರಿದ್ದಾರೆ. ಹತ್ತನೇ ಆರೋಪಿಯಾದ ವಿಶೇಷ ಸಬ್ ಇನ್ಸ್‌ಪೆಕ್ಟರ್ ಪೌಲ್ದುರೈ, ವಿಚಾರಣೆಯ ಸಮಯದಲ್ಲಿ ಕೊವಿಡ್​​-19ನಿಂದ ನಿಧನರಾಗಿದ್ದರು.

Share News