ಸುರತ್ಕಲ್ : ಗ್ಯಾರೇಜ್ ವೊಂದರಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಕಳವು ಗೈದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೂಲತಃ ರಾಜಸ್ಥಾನದ ಜೋದ್ ಪುರ ನಿವಾಸಿ ಸದ್ಯ ಬೆಂಗಳೂರಿನ ಬನಶಂಕರಿ ಶ್ರೀನಿವಾಸ ನಗರ ನಿವಾಸಿ ಮುಖೇಶ್ ದಾಸ್ ( 46) ಬಂಧಿತ ಆರೋಪಿ.
ಆರೋಪಿಯ ಬಳಿಯಿದ್ದ 96 ಸಾವಿರ ರೂ. ಮೌಲ್ಯದ ವಾಹನಗಳ ಬಿಡಿಭಾಗಗಳು, ಕೃತ್ಯಕ್ಕೆ ಬಳಸಿದ್ದ 15 ಲಕ್ಷ ರೂ.ಮೌಲ್ಯದ ಈಚರ್ ಲಾರಿ ಸೇರಿದಂತೆ 15.96 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ವಿವರ: 2025ರ ಫೆ.14 ರಂದು ರಾತ್ರಿ ಲಾರಿವೊಂದರಲ್ಲಿ ಬಂದ ಚಾಲಕನೊಬ್ಬ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿರುವ ಫ್ರೆಂಡ್ಸ್ ಗ್ಯಾರೇಜ್ ನ ಬಳಿ ಲಾರಿಯನ್ನು ಪಾರ್ಕ್ ಮಾಡಿ ಗ್ಯಾರೇಜ್ ನಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ. ಈ ವೇಳೆ ಎರಡು ಘನ ವಾಹನದ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ತನ್ನ ಲಾರಿಯಲ್ಲಿ ಪರಾರಿಯಾಗಿದ್ದ. ಈ ಬಗ್ಗೆ ಗ್ಯಾರೇಜ್ ಮಾಲಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಬಂಧಿಸಿದ ಸುರತ್ಕಲ್ ಪೊಲೀಸರು ಆತನನ್ನು ನ್ಯಾಯಾಲಯಕ್ಲೆ ಹಾಜರು ಪಡಿಸಿದ್ದ, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

