ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಒಂದು ಘಟಕವಾದ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ತನ್ನ 35 ನೇ ಪದವಿ ಪ್ರದಾನ ಸಮಾರಂಭವನ್ನು ಏ. 3 ರಂದು ಬೆಳಿಗ್ಗೆ 10:00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವ.ಫಾ ರಿಚರ್ಡ್ ಅಲೋಶಿಯಸ್ ಕೊವೆಲ್ಲೋ ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಅವರು ‘ಈ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತೀ ವ. ಡಾ. ಪೀಟರ್ ಪೌಲ್ ಸಲ್ಡಾನ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಸೈಂಟ್ ಅಲೋಷಿಯಸ್ ವಿವಿಯ ಉಪಕುಲಪತಿ ವಂ.ಡಾ ಪ್ರವೀಣ್ ಮಾರ್ಟೀಸ್ SJ ಮತ್ತು ಗೌರವ ಅತಿಥಿಯಾಗಿ ಕೋಲ್ಕತ್ತಾ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿಯೋಪಥಿಯ ಮಾಜಿ ನಿರ್ದೇಶಕ ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ 89 ಹೋಮಿಯೋಪಥಿ ಪದವಿ ಹಾಗೂ 27 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಸ್ವೀಕರಿಸಲಿದ್ದಾರೆ. ಇದೇ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಘೋಷಿಸಿದ 2018-19 ನೇ ಸಾಲಿನ 6 B.H.M.S ರ್ಯಾಂಕ್ ವಿಜೇತರು ಹಾಗೂ 2020ರ ಸಾಲಿನ 11 ಸ್ನಾತಕೋತ್ತರ ರ್ಯಾಂಕ್ ವಿಜೇತರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದರು. ಇದರ ಜೊತೆಗೆ ಕಳೆದ ಐದೂವರೆ ವರ್ಷದ ವಿದ್ಯಾರ್ಥಿ ಜೀವನದ ಶೈಕ್ಷಣಿಕ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪದವಿ ವಿದ್ಯಾರ್ಥಿಗೆ ಚಿನ್ನದ ಪದಕವನ್ನು ಅಂದು ಘೋಷಿಸಲಿದ್ದೇವೆ ಎಂದು ಹೇಳಿದರು.
ಜೊತೆಗೆ 2021-22 ಸಾಲಿನ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗೆ ಮುಲ್ಲೇರಿಯನ್ ಪ್ರಾಯೋಜಿಸಿದ ಡಾ.ಸುಮೋದ್ ಜಾಕೋಬ್ ಸೊಲೊಮನ್ ಪ್ರಶಸ್ತಿ ನೀಡಲಾಗುವುದು ಎಂದರು. ಇನ್ನು ಫಾಧರ್‌ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಸ್ಥಾಪನೆಯ 40ನೇ(ರೂಬಿ ಜುಬಿಲಿ) ವರ್ಷದಲ್ಲಿ ಈ 35ನೇ ಪದವಿ ಪ್ರದಾನ ಸಮಾರಂಭ ನಡೆಯುತ್ತಿರುವುದು ಗಮನಾರ್ಹವಾದುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿಯೋಜಿತ ನಿರ್ದೇಶಕ ವಂ.ಫಾ ಫೌಸ್ಟಿನ್ ಲ್ಯೂಕಸ್ ಲೋಬೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ.ಫಾ. ಅಶ್ವಿನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಾಸ್ಯೂಟಿಕಲ್ ಡಿವಿಜನ್‌ನ ಆಡಳಿತಾಧಿಕಾರಿ ವಂ.ಫಾ. ನೆಲ್ಸನ್ ಧೀರಾಜ್ ಪಾಯ್ಸ್, ಪ್ರಾಂಶುಪಾಲ ಡಾ.ಇ.ಎಸ್.ಜೆ ಪ್ರಭು ಕಿರಣ್, ಉಪಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ, ವೈದ್ಯಕೀಯ ಅಧೀಕ್ಷಕ ಡಾ.ಗಿರೀಶ್ ನವಾಡ ಯು.ಕೆ, 2025ರ ಪದವಿ ಪ್ರದಾನ ಸಂಯೋಜಕಿ ಡಾ.ರೇಶಲ್ ನೊರೊನ್ಹಾ, 2025ರ ಪದವಿ ಪ್ರದಾನ ಮಾಧ್ಯಮ ಸಮಿತಿಯ ಸಂಯೋಜಕಿ ಡಾ.ಶೆರ್ಲಿನ್ ಪೌಲ್ ಮತ್ತಿತರರು ಇದ್ದರು.