ಮಂಗಳೂರು: ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪ ಏರುತ್ತಿದ್ದು, ಇದರ ಜೊತೆಗೆ ಸೀಯಾಳ ದರವೂ 50 ರು.ನಿಂದ 70 ರು.ಗೆ ಏರಿಕೆಯಾಗಿದೆ. ಮತ್ತಷ್ಟು ಏರಿಕೆಯಾಗುವ ಸಂಭವವಿದೆ.
ನಗರದ ಪ್ರದೇಶಗಳಲ್ಲಿ ಶರೀರ ತಂಪಾಗಿಸಿಕೊಳ್ಳಲು ಎಳನೀರು ಸೇವಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡು ತಿಂಗಳ ಹಿಂದಷ್ಟೇ 50 ರು. ಆಗಿದ್ದ ಎಳನೀರಿನ ಬೆಲೆ, ಕಳೆದ ತಿಂಗಳು 60 ರು. ಮತ್ತು ಈ ತಿಂಗಳು 70 ರು.ಗೆ ಏರಿಕೆಯಾಗಿದೆ. ಜೊತೆಗೆ ಕರಾವಳಿಯಲ್ಲಿ ಈ ಬಾರಿ ತೆಂಗಿನ ಫಸಲು ಕಡಿಮೆಯಾಗಿದ್ದು, ಅಕ್ಕಪಕ್ಕದ ಜಿಲ್ಲೆಗಳಿಂದ ತರಿಸುತ್ತಿದ್ದಾರೆ.
ಕಳೆದ 2, 3 ವಾರಗಳಿಂದ ಸ್ಥಳೀಯವಾಗಿ ಸೀಯಾಳ ಪೂರೈಕೆಯಾಗುತ್ತಿಲ್ಲವೆಂದು ಅಂಗಡಿಯ ಮಾಲೀಕರು ಹೇಳಿದ್ದಾರೆ. ನದಿ ತೀರ ಪ್ರದೇಶಗಳಲ್ಲಿ ನೀರಿನ ಕೊರತೆಯಿಂದಾಗಿ ತೆಂಗಿನ ಮರಗಳಲ್ಲಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಪೂರೈಕೆ ಕುಸಿದಿದ್ದು, ಬೆಲೆಯೂ ಏರಿಕೆಯಾಗಿದೆ ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.