ಮಂಗಳೂರು ಸೆ 24 : ಗುರುವಾಯನಕೆರೆ ಪ್ರತಿಷ್ಠಿತ *ವಿದ್ವತ್ ಪಿಯು ಕಾಲೇಜ್* ನಲ್ಲಿ *ಗುರುವಂದನಾ* ” ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕ ವೃಂದಕ್ಕೆ ಗೌರವ ಸಮರ್ಪಣೆ ಮಾಡಿದರು. ವಿದ್ಯಾರ್ಥಿಗಳೇ ಏರ್ಪಡಿಸಿದ್ದ ಈ ಗುರುವಂದನಾ ಕಾರ್ಯಕ್ರಮ ಶಿಕ್ಷಕರ ದಿನಾಚರಣೆಯ ಭಾಗವಾಗಿ ಮೂಡಿ ಬಂದದ್ದು ವಿಶೇಷ. ಎಲ್ಲಾ ಶಿಕ್ಷಕರಿಗೂ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡ ವಿದ್ಯಾರ್ಥಿಗಳು ನಂತರ ಪ್ರತಿ ಶಿಕ್ಷಕರಿಗೂ ಆರತಿ ಬೆಳಗುವುದರ ಮೂಲಕ ಅವರಿಗೆ ಸಮಾಜದಲ್ಲಿ ಇರುವ ಗೌರವದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಬಹಳ ವಿಶೇಷವಾಗಿ ಮೂಡಿ ಬಂದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಮಾ. ಕೀರ್ತನ್ ಹಾಗೂ ಕು. ಸೃಷ್ಟಿ ರವರು ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ಶಿಕ್ಷಕರ ಗುಣಗಳನ್ನು ಕೊಂಡಾಡಿ, ಮಹಾದಾಸೆ ಹೊತ್ತು ಶಿಕ್ಷಣಾರ್ಥಿಗಳಾಗಿ ಬಂದ ಮಕ್ಕಳಿಗೆ ಶಿಕ್ಷಕರು ತಾಯಿ ಸಮಾನವಾಗಿ ಕಾಣುತ್ತಾರೆ ಎಂದರು. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿಯವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಗುಣಗಾನ ಮಾಡಿ, ಆದರ್ಶ ಶಿಕ್ಷಕ ಹೇಗಿರಬೇಕೆಂಬುದನ್ನು ಒತ್ತಿ ಹೇಳಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಈ ಮಂಡಗಳಲೆಯವರು, ಶಿಕ್ಷಕರು ಮಾಡಬಹುದಾದ ಚಮತ್ಕಾರಗಳ ಬಗ್ಗೆ ಪ್ರಸ್ತಾಪಿಸಿ ಒಬ್ಬ ಶಿಕ್ಷಕ ಹೇಗೆ ತಮ್ಮ ಮಕ್ಕಳು ತಮ್ಮನ್ನು ತಾವೇ ಮುನ್ನಡೆಸಿಕೊಳ್ಳುವ ಬಗೆಯನ್ನು ಅರ್ಥೈಸಿ ಅಳವಡಿಸಿಕೊಳ್ಳಲು ಪ್ರೇರೇಪಿಸಬಹುದು ಎಂಬುದನ್ನು ಮನೋಜ್ಞವಾಗಿ ಎಲ್ಲರ ಮುಂದಿಟ್ಟರು. ಕೊನೆಯಲ್ಲಿ ಮಕ್ಕಳೇ ಪ್ರಸ್ತುತಪಡಿಸಿದ ಶಿಕ್ಷಕರ ಸೇವೆಯನ್ನು ಕೊಂಡಾಡುವ ಸಮೂಹ ಗೀತೆ ಶಿಕ್ಷಕ ವೃತ್ತಿಯ ಸಾರ್ಥಕತೆಗೆ ಕೈಗನ್ನಡಿಯಂತಿತ್ತು. ಕರುನಾಡ ಕನ್ನಡ ಕಲಾಸಿರಿ ಬಳಗ ಬೆಂಗಳೂರು ಇವರ ವತಿಯಿಂದ ನೀಡುವ “2025 ನೇ ಸಾಲಿನ ಉತ್ತಮ ಸಾಧಕ ಶಿಕ್ಷಕ ಪ್ರಶಸ್ತಿ” ಗೆ ಭಾಜನರಾಗಿರುವ ವಿದ್ವತ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ನೀಲಕಂಠ ಅವರನ್ನು, ಅವರ ಈ ಸಾಧನೆಗಾಗಿ ಗೌರವಿಸಲಾಯಿತು.
“ವಿದ್ವತ್ ಶಿಕ್ಷಣ ಪ್ರತಿಷ್ಠಾನ” ದ ಕಾರ್ಯದರ್ಶಿಗಳಾದ ಶ್ರೀ ಪ್ರಜ್ವಲ್ ರೈ, ಆಡಳಿತ ಅಧಿಕಾರಿಗಳಾದ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ಶ್ರೀ ಹರೀಶ್ ಕೆ . ಆರ್ ಹಾಗೂ ಎಲ್ಲಾ ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ವಿದ್ಯಾರ್ಥಿಗಳೇ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಮ್ಯಕ್ ತೇಜಸ್ವಿ ಮತ್ತು ಚಂದನ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು.