• Home  
  • *ಯಕ್ಷಗಾನದ ಭೀಷ್ಮ, ಕಲಾತಪಸ್ವಿ ಸುರಿಕುಮೇರು ಕೆ. ಗೋವಿಂದ ಭಟ್ ಅವರ ನಿಧನ*
- DAKSHINA KANNADA - HOME

*ಯಕ್ಷಗಾನದ ಭೀಷ್ಮ, ಕಲಾತಪಸ್ವಿ ಸುರಿಕುಮೇರು ಕೆ. ಗೋವಿಂದ ಭಟ್ ಅವರ ನಿಧನ*

ಬಂಟ್ವಾಳ: ಯಕ್ಷಗಾನ ಲೋಕದ ಅಪ್ರತಿಮ ಕಲಾತಪಸ್ವಿ, ತೆಂಕುತಿಟ್ಟು ಶೈಲಿಯ ಹಿರಿಯ ವಿದ್ವಾಂಸ ಮತ್ತು ಕಳೆದ ಐದು ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಆಧಾರಸ್ತಂಭವಾಗಿದ್ದ ಶ್ರೀ ಸುರಿಕುಮೇರು ಕೆ. ಗೋವಿಂದ ಭಟ್ (85) ಅವರು ಇಂದು ವಿಧಿವಶರಾಗಿದ್ದಾರೆ. ಹೌದು..ಏಳು ದಶಕಗಳ ಕಾಲ ರಂಗಸ್ಥಳವನ್ನೇ ಉಸಿರಾಗಿಸಿಕೊಂಡಿದ್ದ, ತೆಂಕುತಿಟ್ಟಿನ ಅದ್ವಿತೀಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ (85) ಅವರು ಗೆಜ್ಜೆ ಕಳಚಿ ಕಣ್ಮರೆಯಾಗಿದ್ದಾರೆ. ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. […]

Share News

ಬಂಟ್ವಾಳ: ಯಕ್ಷಗಾನ ಲೋಕದ ಅಪ್ರತಿಮ ಕಲಾತಪಸ್ವಿ, ತೆಂಕುತಿಟ್ಟು ಶೈಲಿಯ ಹಿರಿಯ ವಿದ್ವಾಂಸ ಮತ್ತು ಕಳೆದ ಐದು ದಶಕಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಆಧಾರಸ್ತಂಭವಾಗಿದ್ದ ಶ್ರೀ ಸುರಿಕುಮೇರು ಕೆ. ಗೋವಿಂದ ಭಟ್ (85) ಅವರು ಇಂದು ವಿಧಿವಶರಾಗಿದ್ದಾರೆ.

ಹೌದು..ಏಳು ದಶಕಗಳ ಕಾಲ ರಂಗಸ್ಥಳವನ್ನೇ ಉಸಿರಾಗಿಸಿಕೊಂಡಿದ್ದ, ತೆಂಕುತಿಟ್ಟಿನ ಅದ್ವಿತೀಯ ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ (85) ಅವರು ಗೆಜ್ಜೆ ಕಳಚಿ ಕಣ್ಮರೆಯಾಗಿದ್ದಾರೆ.

ಯಕ್ಷಗಾನದ ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು ಸಿದ್ಧಹಸ್ತರು.

ಬಾಲ್ಯವೇ ಕಣ್ಣೀರಿನ ಕತೆ!
1940, ಮಾರ್ಚ್ 22ರಂದು ಬಂಟ್ವಾಳದ ಕೋಡಪದವಿನ ಕಡು ಬಡತನದ ಗುಡಿಸಲಲ್ಲಿ ಜನಿಸಿದ ಗೋವಿಂದರ ಬಾಲ್ಯ ಕಣ್ಣೀರಿನ ಕತೆಯಾಗಿತ್ತು. ತಂದೆಯ ಅನಾರೋಗ್ಯ ಆಸ್ತಿಗಾಗಿ ನಡೆದ ಸಂಘರ್ಷ, ಹೋಟೆಲ್‌ನಲ್ಲಿ ಎಂಜಲು ತಟ್ಟೆ ತೊಳೆದ ನೋವು… ಹೀಗೆ ಹಸಿವಿನ ಕಿಚ್ಚಿನಲ್ಲೇ ಬೆಂದು ಪುಟಕ್ಕಿಟ್ಟ ಚಿನ್ನದಂತೆ ಕಂಗೊಳಿಸಿದವರು ಭಟ್ಟರು

ಧರ್ಮಸ್ಥಳ ಮೇಳದೊಂದಿಗೆ ಒಡನಾಟ: ಅವರು ಕಳೆದ 50 ವರ್ಷಗಳಿಗೂ ಹೆಚ್ಚು ಕಾಲ ಧರ್ಮಸ್ಥಳ ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಇಳಿ ವಯಸ್ಸಿನಲ್ಲೂ ರಂಗಭೂಮಿಯ ಮೇಲಿನ ಮೋಹ ಬಿಟ್ಟವರಲ್ಲ. ದೃಷ್ಟಿ ಮಂಜಾಗುತ್ತಿದ್ದರೂ “ರಂಗಸ್ಥಳ ಬಿಟ್ಟು ನನಗೇನು ಗತಿ?” ಎನ್ನುವ ಅವರ ಕಲಾ ಪ್ರೇಮ ಯುವ ಕಲಾವಿದರಿಗೆ ಸದಾ ಸ್ಫೂರ್ತಿ.
ಗೌರವಾರ್ವಿತ ಕಲಾವಿದ: “ನೀವು ವೇಷ ಹಾಕದಿದ್ದರೂ ಪರವಾಗಿಲ್ಲ, ನಮ್ಮ ಮೇಳದ ಚೌಕಿಯಲ್ಲಿ ನೀವಿದ್ದರೆ ಸಾಕು” ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ್ದ ಗೌರವ ಅವರ ಘನತೆಗೆ ಸಾಕ್ಷಿಯಾಗಿದೆ.
ಅಪ್ರತಿಮ ಪಾತ್ರಧಾರಿ: ರಂಗಸ್ಥಳದ ಮೇಲೆ ಕೌರವ, ಕರ್ಣನಂತಹ ಗಂಭೀರ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಅವರ ಅಭಿನಯ ಮತ್ತು ಮಾತುಗಾರಿಕೆ ಅನನ್ಯವಾಗಿತ್ತು. ಯಕ್ಷಗಾನದ ಹೆಜ್ಜೆಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಅವರು ಹೊಸ ಮನ್ವಂತರವನ್ನೇ ಸೃಷ್ಟಿಸಿದ್ದರು.
ಅವರ ನಿಧನದಿಂದ ಯಕ್ಷಗಾನ ರಂಗದ ಒಂದು ಸುವರ್ಣ ಯುಗವೇ ಅಂತ್ಯಗೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಲಾಭಿಮಾನಿಗಳು ಮತ್ತು ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

Share News