ಮಂಗಳೂರು: ಕೋಮುಹಿಂಸೆ ನಿಗ್ರಹಿಸಲು ಸರ್ಕಾರ ಹೊಸದಾಗಿ ಕಾರ್ಯಪಡೆ ರಚಿಸಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಹೆಚ್ಚುವರಿಯಾಗಿ ಈ ಕಾರ್ಯಪಡೆಯ ಮುಖ್ಯಸ್ಥರ ಹೊಣೆ ನೀಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೋಮುಹಿಂಸೆ ನಿಗ್ರಹಿಸಲು ಸರ್ಕಾರ ಹೊಸದಾಗಿ ಕಾರ್ಯಪಡೆ ರಚಿಸಿದ್ದು, ಇದರ ಕಾರ್ಯಾಚರಣೆಗೆ ಇದೇ 13ರಂದು ಚಾಲನೆ ನೀಡಲು ಸಿದ್ಧತೆಗಳು ನಡೆದಿವೆ. ಡಿಐಜಿ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿರುವ ಈ ಕಾರ್ಯಪಡೆಯಲ್ಲಿ ಒಟ್ಟು 248 ಸಿಬ್ಬಂದಿ ಹಾಗೂ ಮೂರು ಕಂಪನಿಗಳು ಇರಲಿವೆ.
ಸದ್ಯಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಈ ವಿಶೇಷ ಕಾರ್ಯಪಡೆಯ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ. ಇದೇ 13 ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಈ ಕಾರ್ಯಪಡೆಯನ್ನು ಉದ್ಘಾಟಿಸಲಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಮೂರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈ ಕಾರ್ಯಪಡೆಯ ಕೇಂದ್ರ ಕಚೇರಿ ಮಂಗಳೂರಿನಲ್ಲೇ ಇರಲಿದೆ. ಕಾರ್ಯಪಡೆಯಲ್ಲಿ ತಲಾ 80 ಸಿಬ್ಬಂದಿಯನ್ನು ಒಳಗೊಂಡ ಮೂರು ಕಂಪನಿಗಳು ಇರಲಿವೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ತಲಾ ಒಂದು ಕಂಪನಿಗಳನ್ನು ನಿಯೋಜಿಸಲಾಗುತ್ತದೆ.
ಏನಿದರ ಮುಖ್ಯ ಕಾರ್ಯ
ದ್ವೇಷ ಭಾಷಣ, ಉದ್ರೇಕಕಾರಿ ಘಟನೆಗಳು ಮತ್ತು ಕೋಮು ಸಂಬಂಧಿತ ಘಟನೆಗಳಿಗೆ ಸಂಬಂಧಿಸಿ ಗುಪ್ತ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ತಾಂತ್ರಿಕ ಕೋಶವನ್ನು ಒಳಗೊಂಡ ಗುಪ್ತವಾರ್ತೆ ಘಟಕವನ್ನು ಈ ವಿಶೇಷ ಕಾರ್ಯಪಡೆ ಹೊಂದಿರಲಿದೆ. ಸಂಭಾವ್ಯ ಕೋಮು ಹಿಂಸಾಚಾರ ತಪ್ಪಿಸಲು, ಕೋಮು ಗಲಭೆಯಂತಹ ಸಂಚುಗಳನ್ನು ವಿಫಲಗೊಳಿಸುವಲ್ಲಿ ಈ ಘಟಕವು ಮಹತ್ವದ ಪಾತ್ರ ನಿಭಾಯಿಸಲಿದೆ