ಮಂಗಳೂರು : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಮಹಿಳಾ ವಾರ್ಡ್‌ಗಳಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಇತ್ತೀಚೆಗೆ ಆಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿ ಮಾಡಿದ ಅಧ್ಯಕ್ಷರು, ಅವರ ಆರೋಗ್ಯದ ಬಗ್ಗೆ ವಿಚಾರಿಸಿ ಸಾಂತ್ವನ ಹೇಳಿದರು. ಸಂತ್ರಸ್ತೆಗೆ ಸರ್ಕಾರದಿಂದ ಸಿಗಬೇಕಾದ ಸೂಕ್ತ ಪರಿಹಾರ ಮತ್ತು ನೆರವು ಕೊಡಿಸುವ ಬಗ್ಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರು. ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದರು. ಆಸ್ಪತ್ರೆಯಲ್ಲಿ ನರ್ಸಿಂಗ್ ಸಿಬ್ಬಂದಿಯ ತೀವ್ರ ಕೊರತೆ ಇರುವುದರಿಂದ ಹಾಲಿ ಇರುವ ಸಿಬ್ಬಂದಿಗಳು ಹೆಚ್ಚಿನ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಡಾ. ನಾಗಲಕ್ಷ್ಮಿ ಚೌಧರಿ ಅವರು, ಈ ವಿಷಯವನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷ ಗುಪ್ತಾ ಅವರ ಗಮನಕ್ಕೆ ತಂದು, ಶೀಘ್ರವಾಗಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.