• Home  
  • *ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಾರೈಕೆ ಹಾಗೂ ಪ್ರೇರಣಾ ಕಾರ್ಯಕ್ರಮ*
- DAKSHINA KANNADA

*ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಾರೈಕೆ ಹಾಗೂ ಪ್ರೇರಣಾ ಕಾರ್ಯಕ್ರಮ*

ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಆಶೀರ್ವಚನ ಮತ್ತು ಪ್ರೇರಣಾ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಬೈಬಲ್, ಭಗವದ್ಗೀತೆ ಹಾಗೂ ಕುರಾನ್ ಧರ್ಮಗ್ರಂಥಗಳ ಪಠಣ ಮತ್ತು ದೇವ ಸ್ತುತಿಯೊಂದಿಗೆ ಅತ್ಯಂತ ಭಕ್ತಿಪೂರ್ವಕವಾಗಿ ಆರಂಭಿಸಲಾಯಿತು. ಪರೀಕ್ಷೆಗೆ ಸಿದ್ಧರಾಗಿರುವ ವಿದ್ಯಾರ್ಥಿಗಳಿಗೆ ಧರ್ಮಗುರುಗಳಾದ ವಂದನೀಯ ಫಾ. ಐವನ್ ಮೈಕಲ್ ರೋಡ್ರಿಗಸ್, ಶ್ರೀ ಕ್ಷೇತ್ರ ಕಣಿಯೂರಿನ ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಉಳ್ಳಾಲದ […]

Share News

ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಉಜ್ವಲ ಭವಿಷ್ಯಕ್ಕಾಗಿ ಆಶೀರ್ವಚನ ಮತ್ತು ಪ್ರೇರಣಾ ಕಾರ್ಯಕ್ರಮವು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಬೈಬಲ್, ಭಗವದ್ಗೀತೆ ಹಾಗೂ ಕುರಾನ್ ಧರ್ಮಗ್ರಂಥಗಳ ಪಠಣ ಮತ್ತು ದೇವ ಸ್ತುತಿಯೊಂದಿಗೆ ಅತ್ಯಂತ ಭಕ್ತಿಪೂರ್ವಕವಾಗಿ ಆರಂಭಿಸಲಾಯಿತು. ಪರೀಕ್ಷೆಗೆ ಸಿದ್ಧರಾಗಿರುವ ವಿದ್ಯಾರ್ಥಿಗಳಿಗೆ ಧರ್ಮಗುರುಗಳಾದ ವಂದನೀಯ ಫಾ. ಐವನ್ ಮೈಕಲ್ ರೋಡ್ರಿಗಸ್, ಶ್ರೀ ಕ್ಷೇತ್ರ ಕಣಿಯೂರಿನ ಪರಮಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹಾಗೂ ಉಳ್ಳಾಲದ ಶಿಕ್ಷಣ ತರಬೇತುದಾರರಾದ ಪೂಜ್ಯ ಬಿ.ಕೆ. ಯುನುಸ್ ಇಮ್ದಾದಿ ಅವರು ದಿವ್ಯ ಆಶೀರ್ವಚನ ನೀಡಿದರು. ಪರೀಕ್ಷೆಯನ್ನು ಎದುರಿಸುವ ಕ್ರಮ ಹಾಗೂ ಜೀವನದ ಮೌಲ್ಯಗಳ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ನೀಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯ ಮಟ್ಟದ ನೀತಿ ಶಿಕ್ಷಣ ಹಾಗೂ ಮೌಲ್ಯ ಶಿಕ್ಷಣ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ 7ನೇ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಅವರು ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಹಾಗೂ ಪರೀಕ್ಷಾ ಸಾಮಗ್ರಿಗಳನ್ನು ವಿತರಿಸಿದರು. ವಿದ್ಯಾರ್ಥಿಗಳಾದ ಫಾತಿಮತ್ ಸಹಳಾ ಹಾಗೂ ಭಕ್ತಿ ಕೆ. ತಮ್ಮ ವಿದ್ಯಾರ್ಥಿ ಜೀವನದ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರ ಮುಂದೆ ಮಂಡಿಯೂರಿ ಆಶೀರ್ವಾದ ಪಡೆದ ಕ್ಷಣ ಭಾವುಕ ಹಾಗೂ ಅರ್ಥಪೂರ್ಣವಾಗಿತ್ತು. ವೇದಿಕೆಯಲ್ಲಿ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷರಾದ ಶ್ರೀ ವಲೇರಿಯನ್ ವೇಗಸ್, ಕಾರ್ಯದರ್ಶಿ ಶ್ರೀಮತಿ ಶಾಲೆಟ್ ಪಾಯ್ಸ್ ಹಾಗೂ ಸಿ. ಮರೀನಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ವಂದನೀಯ ಫಾ. ಅಮಿತ್ ಪ್ರಕಾಶ್ ರೋಡ್ರಿಗಸ್ ಸ್ವಾಗತಿಸಿದರು. ಸಹ ಶಿಕ್ಷಕಿ ಶ್ರೀಮತಿ ಚೈತ್ರ ವಂದಿಸಿದರು. ಸಹ ಶಿಕ್ಷಕ ಶ್ರೀ ಸಚಿನ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು

Share News