canaratvnews

*ವಿಶ್ವಾಸ, ಪ್ರೀತಿ, ಗೌರವ ಇದ್ದಲ್ಲಿ ಸಮಸ್ಯೆ ಇಲ್ಲ: ಮೌಲಾನಾ ಅಬ್ದುಲ್ ಹಮೀದ್ ದಾರಿಮಿ*

ಮಂಗಳೂರು: ಮಾ.10 : “ಮನುಷ್ಯನ ನಡೆ, ನುಡಿ ಮತ್ತು ಗುಣ ಸರಿಯಿದ್ದಲ್ಲಿ ಜೀವನ ಸುಂದರವಾಗಿರುತ್ತದೆ. ಹೃದಯದಲ್ಲಿ ಮೃದುತ್ವ, ಶಾಂತಿ ಹಾಗೂ ಕರುಣೆ ಹೊಂದಿರಬೇಕು. ಸಮಾಜದಲ್ಲಿ ಪರಸ್ಪರ ವಿಶ್ವಾಸ, ಪ್ರೀತಿ ಮತ್ತು ಗೌರವ ನೆಲೆಸಿದಾಗ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ” ಎಂದು ಚೊಕ್ಕಬೆಟ್ಟುವಿನ ಮೊಹಿಯುದ್ದೀನ್ ಜುಮಾ ಮಸ್ಜಿದ್‍ನ ಧರ್ಮಗುರುಗಳಾದ ಮೌಲಾನಾ ಯು.ಕೆ. ಅಬ್ದುಲ್ ಅಜೀಜ್ ದಾರಿಮಿ ತಿಳಿಸಿದರು.

ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದ ಆವರಣದಲ್ಲಿ ‘ಸಂತ ಮದರ್ ತೆರೆಸಾ ವಿಚಾರ ವೇದಿಕೆ’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸೌಹಾರ್ದ ಇಫ್ತಾರ್ ಕೂಟ’ದಲ್ಲಿ ಮುಖ್ಯ ಅತಿಥಿಯಾಗಿ ಅವರು ಸಂದೇಶ ನೀಡಿದರು. ದ್ವೇಷ ಮತ್ತು ಕೋಪದ ಸಂದರ್ಭಗಳಲ್ಲಿ ಪ್ರೀತಿ ಮೂಡುವಂತಾಗಬೇಕು. ನಮ್ಮವರೊಂದಿಗೆ ಪ್ರೀತಿಯಿಂದ ವರ್ತಿಸಿದಾಗ ಮಾತ್ರ ಅನ್ಯರನ್ನೂ ಪ್ರೀತಿಸಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಹ ಕುಲಪತಿ ಫಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ. ಮಾತನಾಡಿ, ಮನುಷ್ಯನ ನೈಜ ನಡವಳಿಕೆ ಮುಖ್ಯವೇ ಹೊರತು ತೋರ್ಪಡಿಕೆಯಲ್ಲ. ಸಮಾಜದಲ್ಲಿ ಬಂಧುತ್ವ ಮತ್ತು ಶಾಂತಿ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಮಾತನಾಡಿ, “ಕಳೆದ 8 ವರ್ಷಗಳಿಂದ ಜಿಲ್ಲೆಯಲ್ಲಿ ಸೌಹಾರ್ದತೆ ಮತ್ತು ಸಹಬಾಳ್ವೆಯ ಅಗತ್ಯವನ್ನು ಮನಗಂಡು ಈ ವೇದಿಕೆ ನಿರಂತರವಾಗಿ ಶ್ರಮಿಸುತ್ತಿದೆ. ವೈವಿಧ್ಯತೆಗಳನ್ನು ಸಂಭ್ರಮಿಸುವುದು ಮತ್ತು ಎಲ್ಲರೊಡನೆ ಪ್ರೀತಿ ಹಂಚುವುದೇ ನಮ್ಮ ಧ್ಯೇಯ” ಎಂದರು.

ವೇದಿಕೆಯಲ್ಲಿ ಖ್ಯಾತ ಸಾಹಿತಿ ಬಿ.ಎಂ. ರೋಹಿಣಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಬೆಥನಿ ಮುಖ್ಯಸ್ಥೆ ಸಿಸ್ಟರ್ ರೋಸ್ ಮೇರಿ, ಬಾವುಟಗುಡ್ಡ ಝೀನತ್ ಭಕ್ಷ್ ಜುಮಾ ಮಸ್ಜಿದ್‍ನ ಉಪಾಧ್ಯಕ್ಷ ಕೆ. ಅಶ್ರಫ್ ಹಾಗೂ ಸಾಮರಸ್ಯ ಮಂಗಳೂರು ಮುಖ್ಯಸ್ಥೆ ಮಂಜುಳಾ ನಾಯಕ್ ಉಪಸ್ಥಿತರಿದ್ದು, ಸೌಹಾರ್ದತೆಯ ಮಹತ್ವದ ಕುರಿತು ಮಾತನಾಡಿದರು.

ವೇದಿಕೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು. ಗಣ್ಯರ ಸಮ್ಮುಖದಲ್ಲಿ ಇಫ್ತಾರ್ ಕೂಟ ಯಶಸ್ವಿಯಾಗಿ ಜರುಗಿತು

Share News
Exit mobile version