ಮಂಗಳೂರು ಸೆಪ್ಟೆಂಬರ್ 09: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮಂಗಳೂರು ಇದರ ಆಶ್ರಯದಲ್ಲಿ ‘ಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಮರಣಾ ದಿನಾಚರಣೆಯ ಅಂಗವಾಗಿ 11 ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಸಹಬಾಳ್ವೆಗೆ ಎದುರಾಗಿರುವ ಅಪಾಯಗಳು; ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ. ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ. ಶರೀಫಾ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷರಾದ ಅತೀ. ವಂ. ಡಾ| ಎಲೋಶಿಯಸ್ ಪೌಲ್ ಡಿ’ಸೋಜರವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋರವರು ವಹಿಸಲಿದ್ದಾರೆ. ಅಂದು ಬೆಳಿಗ್ಗೆ 8.30ಕ್ಕೆ ಏಕತಾರಿ ಹಾಡುಗಾರರಾದ ನಾದಾ ಮಣಿನಾಲ್ಕೂರುರವರಿಂದ ‘ಪ್ರೀತಿಯ ಸಿಂಚನ’ ಎಂಬ ‘ಸೌಹಾರ್ದ ಗಾಯನ’ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಏಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಹಿರಿಯ ಚೇತನ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ನಾಯಕರಾದ ಹಾಗೂ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ವಿಜೇತರಾದ ಕರಿಯ ಕೆ. ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು. ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆ ಅಧ್ಯಕ್ಷರು ರೋಯ್ ಕ್ಯಾಸ್ಟಲಿನೋ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಪ್ರೀತಿ ಮತ್ತು ಸೇವೆಯ ಮೂಲಕ ಜಗತ್ತಿಗೆ ಮಹಾತಾಯಿ ಎಂದು ಗುರುತಿಸಿಕೊಂಡಿರುವ ಸಂತ ಮದರ್ ತೆರೇಸಾರವರ ವಿಚಾರ ಧಾರೆಯನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಡುವ ಮಹತ್ತರ ಜವಾಬ್ದಾರಿ ಸಮಾಜದ ಮೇಲಿದೆ. ಕಳೆದ 8 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂತ ಮದರ್ ತೆರೇಸಾ ವಿಚಾರ ವೇದಿಕೆಯಲ್ಲಿ ಸರ್ವಧರ್ಮದ ಸೌಹಾರ್ದಪ್ರಿಯ ಜನತೆ, ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ, ಆದಿವಾಸಿ, ರೈತ, ಕಾರ್ಮಿಕ ಸಂಘಟನೆಗಳ ನಾಯಕರು, ಮಧ್ಯಮವರ್ಗದ ನೌಕರರು, ಸಾಹಿತಿಗಳು, ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರು, ವಕೀಲರು, ವೈದ್ಯರು, ಬುದ್ದಿಜೀವಿಗಳನ್ನೊಳಗೊಂಡ ಜಾತ್ಯಾತೀತ ನೆಲೆಗಟ್ಟಿನ ಮನಸ್ಸುಗಳು ಸೌಹಾರ್ದ ತಂಡವಾಗಿ ವಿವಿಧ ಹಂತದ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಲಾಗುತ್ತದೆ. ಪ್ರತಿಯೊಂದು ಧರ್ಮದ ಹಬ್ಬಗಳು ಸರ್ವಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ಸೌಹಾರ್ದ ದೀಪಾವಳಿ, ಸೌಹಾರ್ದ ಕ್ರಿಸ್‍ಮಸ್, ಸೌಹಾದ್ ಇಫ್ತಾರ್‍ಕೂಟ ಹಾಗೂ ನಾಡಹಬ್ಬ ದಸರಾವನ್ನು ಸಾಮರಸ್ಯ ದಸರವನ್ನಾಗಿ ಆಚರಿಸಲಾಗುತ್ತಿದೆ. ಮದರ್ ತೆರೇಸಾರವರಿಗೆ ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ‘ಚಿಣ್ಣರ ಕಲರವ’ ಎಂಬ ಮಕ್ಕಳ ಸಂತಸ ಕಲಿಕಾ ಕಾರ್ಯಾಗಾರವನ್ನು ಕೂಡ ನಡೆಸಲಾಗಿದೆ. ಸೌಹಾರ್ದತೆ ಹಾಗೂ ಜನತೆಯ ಬದುಕಿನ ಪ್ರಶ್ನೆಗಳು ಎದುರಾದಾಗ ಇತರ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡು ಶಕ್ತಿಮೀರಿ ಶ್ರಮಿಸಲಾಗಿದೆ.ಈ ಹಿನ್ನೆಲೆಯಲ್ಲಿ ತಾ. 11-09-2025ರಂದು ನಗರದ ಪುರಭವನದಲ್ಲಿ ನಡೆಯುವ ಅತ್ಯಂತ ಮಹತ್ವದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಜ್ಞಾವಂತ ಜನತೆ, ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರಧಾಕಾರ್ಯದರ್ಶಿ ಸುನಿಲ್‍ಕುಮಾರ್ ಬಜಾಲ್ ಗೋಷ್ಠಿಯಲ್ಲಿ ತಿಳಿಸಿದರು
ಸಂತೋಷ್ ಡಿ’ಸೋಜ ಬಜ್ಪೆ ಅಧ್ಯಕ್ಷರು, ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಇಲಿಯಾಸ್ ಫೆರ್ನಾಂಡಿಸ್, ಉಪಾಧ್ಯಕ್ಷರು, ಸಂತ ಮದರ್ ತೆರೇಸಾ ವಿಚಾರ ವೇದಿಕೆ
ಮಂಜುಳಾ ನಾಯಕ್, ಅಧ್ಯಕ್ಷರು, ಸಾಮರಸ್ಯ,ಮಂಗಳೂರು
ರಾಕೇಶ್ ಕುಂದರ್, ದಲಿತ ಚಳುವಳಿಯ ಯುವನಾಯಕರು
ರೆಹಮಾನ್‍ಖಾನ್ ಕುಂಜತ್ತಬೈಲ್ ಸಾಮಾಜಿಕ ಚಿಂತಕರು
ಸುಮತಿ ಎಸ್. ಹೆಗ್ಡೆ, ಜಿಲ್ಲಾ ಮಹಿಳಾ ಮುಖಂಡರು
ಡೋಲ್ಫಿ ಡಿಸೋಜ ವಿಲ್ಮಾ ಮೊಂತೆರೋ
ಜ್ಯೋತಿ ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು