ಬೆಂಗಳೂರು, : ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ದ್ವಿತೀಯ ಪದವಿ ಪ್ರದಾನ ಸಮಾರಂಭ ಶನಿವಾರ ದಂದು ನಡೆಯಿತು. ಮೊದಲಿಗೆ ರ‍್ಯಾಂಕ್ ಹೋಲ್ಡರ್ಸ್ ಮತ್ತು ವಿಶೇಷ ಪ್ರಶಸ್ತಿ ವಿಜೇತರ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ|ಎಂ.ಸಿ. ಸುಧಾಕರ್, ಹಾಗೂ ಮುಖ್ಯ ಅತಿಥಿ ಡಾ. ಜೆ.ಎನ್ .ಮೂರ್ತಿ ,ನಿರ್ದೇಶಕರು, ಐಐಎಸ್ಇಆರ್ , ತಿರುವನಂತಪುರಂ. ಚಾನ್ಸಲರ್ ವಂದನೀಯ ಡೈನೋಸಿಯಸ್ ವಾಸ್, ಉಪಕುಲಪತಿ ವಂದನೀಯ ವಿಕ್ಟರ್ ಲೋಬೋ ಉಪಸ್ಥಿತರಿದ್ದರು
ಒಟ್ಟು 2,747 ವಿದ್ಯಾರ್ಥಿಗಳು ಪದವಿ ಪಡೆದಿದ್ದು, 2,009 ಮಂದಿ ಪದವಿ ಹಾಗೂ 738 ಮಂದಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 143 ಮಂದಿ ರ‍್ಯಾಂಕ್ ಹೋಲ್ಡರ್ ಗಳಾಗಿದ್ದು , 40 ಮಂದಿ ವಿಶೇಷ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು.
ಮುಂದುವರಿದು ಮಾತನಾಡಿದ ಡಾ| ಎಂ.ಸಿ. ಸುಧಾಕರ್, ವಿದ್ಯಾರ್ಥಿಗಳ ಯಶಸ್ಸಿಗೆ ಪೋಷಕರು ಮತ್ತು ಶಿಕ್ಷಕರ ಬೆಂಬಲ ಮುಖ್ಯವೆಂದು ತಿಳಿಸಿದರು. “ಅವಕಾಶಗಳು ನಮ್ಮ ಮನೆ ಬಾಗಿಲಿಗೆ ಬರುವುದಿಲ್ಲ, ನಾವು ಅವನ್ನು ಹುಡುಕಬೇಕು ಮತ್ತು ನಮ್ಮ ಶ್ರಮದಿಂದ ಮುನ್ನಡೆಯಬೇಕು” ಎಂದು ಹೇಳಿದರು.
ಡಾ. ಜೆ.ಎನ್. ಮೂರ್ತಿ ವಿದ್ಯಾರ್ಥಿಗಳನ್ನು ದೊಡ್ಡ ಕನಸು ಕಾಣಲು ಮತ್ತು ಹಸಿರು ಶಕ್ತಿ, ಆರೋಗ್ಯ, ತ್ಯಾಜ್ಯ ನಿರ್ವಹಣೆ, ಕೃತಕ ಬುದ್ಧಿಮತ್ತೆ ಮುಂತಾದ ಕ್ಷೇತ್ರಗಳಲ್ಲಿ ಆವಿಷ್ಕಾರಗಳತ್ತ ಗಮನಹರಿಸಲು ಕರೆ ನೀಡಿದರು.
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, “ವೃತ್ತಿಜೀವನದ ಯಶಸ್ಸಿನ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವುದು ಮುಖ್ಯ. ಪೋಷಕರು ಮತ್ತು ಶಿಕ್ಷಕರಿಗೆ ಸದಾ ಕೃತಜ್ಞರಾಗಿರಿ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಇತರ ಅಧಿಕಾರಿಗಳು ಮತ್ತು ಅತಿಥಿಗಳು ಭಾಗವಹಿಸಿದ್ದರು. 1882ರಲ್ಲಿ ಸ್ಥಾಪನೆಯಾದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಈ ವರ್ಷ ತನ್ನ ಸಾರ್ಥಕ ಸೇವೆಯ 143 ಸಂವತ್ಸರಗಳನ್ನು ಪೂರೈಸುತ್ತಿದೆ.