ವಿಟ್ಲ: ಮಂಗಳೂರು ಧರ್ಮ ಪ್ರಾಂತ್ಯ ವ್ಯಾಪ್ತಿಯ ಸಂತ ಜಾನ್ ಪಾವ್ಲ್ ದ್ವಿತೀಯ ವಿಟ್ಲ ವಲಯದ ವೈಸಿಎಸ್ ಸಂಘಟನೆಯ 2025 ನೇ ಸಾಲಿನ ದ್ವಿತೀಯ ಸಮಾವೇಶ ಭಾನುವಾರ ಅಕ್ಟೋಬರ್ 19 ರಂದು ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ನಡೆಯಿತು. ವಿಟ್ಲ ವಲಯದ ಮುಖ್ಯ ಗುರುಗಳು ಮತ್ತು ಎಲ್ಲಾ ಗುರುಗಳ ಸಹಭಾಗಿತ್ವದಲ್ಲಿ ನಡೆದ ಸಮಾವೇಶದಲ್ಲಿ ವಲಯ ವ್ಯಾಪ್ತಿಯ 8 ಚರ್ಚ್ ಗಳ 85 ಮಂದಿ ವೈಸಿಎಸ್ ಸದಸ್ಯರು ಭಾಗವಹಿಸಿದ್ದರು.
ವಲಯದ ವೈಸಿಎಸ್ ನಿರ್ದೇಶಕ ವಂದನೀಯ ಫಾ. ನವೀನ್ ಪ್ರಕಾಶ್ ಪಿಂಟೊ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಯುವ ಶಕ್ತಿ ಒಂದು ಉತ್ತಮ ಅಮೂಲ್ಯ ಹಾಗೂ ಆಕರ್ಷಕ ಶಕ್ತಿ. ದೇವರು ನಮ್ಮನ್ನು ಹಲವಾರು ಪ್ರತಿಭೆ ಮತ್ತು ಮೌಲ್ಯಗಳನ್ನು ಸೇರಿಸಿ ರೂಪಿಸಿದ್ದಾರೆ. ನಮ್ಮಲ್ಲಿನ ಪ್ರತಿಭೆ ಹಾಗೂ ಯುವ ಶಕ್ತಿಯನ್ನು ಊರ್ಜಿತಗೊಳಿಸಿ ನೂರು ಪ್ರತಿಶತ ಫಲವನ್ನು ಪಡೆಯ ಬೇಕಾದರೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯ ಅಗತ್ಯ ಇದೆ ಎಂದರು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಯಾ ಮಿನೇಜಸ್ ಅವರು ವೈಸಿಎಸ್ ಸದಸ್ಯರಿಗೆ ತರಬೇತಿ ನೀಡಿದರು.
ಸಮಾವೇಶದಲ್ಲಿ ಪೆರುವಾಯಿ ಚರ್ಚ್ ನ ಧರ್ಮಗುರು ವಂದನೀಯ ಫಾ. ಸೈಮನ್ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಪೆರುವಾಯಿ ಚರ್ಚ್ ಉಪಾಧ್ಯಕ್ಷ ಡೆನಿಸ್ ಮೊಂತೇರೊ, ಕಾರ್ಯದರ್ಶಿ ವಾಯ್ಲೆಟ್ ಕುವೆಲ್ಲೊ, ಪೆರುವಾಯಿ ವೈಸಿಎಸ್ ಘಟಕದ ಸಚೇತಕಿ ನಿಕ್ಷಿತಾ ಡಿ’ಸೋಜಾ, ಆಧ್ಯಕ್ಷ ರೋಯ್‌ಸ್ಟನ್ ಡಿ’ಸೋಜಾ, ವಲಯ ಅಧ್ಯಕ್ಷ ಪ್ರನೋಯ್ ಮಾರ್ಟಿಸ್, ಕಾರ್ಯದರ್ಶಿ ಆ್ಯನ್ಸಿಟಾ ಪಿಂಟೊ ಅವರು ಉಪಸ್ಥಿತರಿದ್ದರು.
ಮರ್ವಿನ್ ಸಿಕ್ವೇರಾ ಸ್ವಾಗತಿಸಿದರು. ಅಲ್‌ಫ್ರೀಡಾ ಕುಟಿನ್ಹಾ ಕಾರ್ಯಕ್ರಮ ನಿರ್ವಹಿಸಿದರು. ಪ್ರವಿತ್ ಡಿ’ಸೋಜಾ ವಂದಿಸಿದರು.















