ಮಂಗಳೂರು, ಅಕ್ಟೋಬರ್ 12 ಸಂತ ಆಗ್ನೆಸ್ ಸ್ವಾಯತ್ತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಸೌಹಾರ್ದಯುತ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ದೃಷ್ಟಿಯಿಂದ ಅಕ್ಟೋಬರ್ 19 ಮತ್ತು 22 ರಂದು ನಿಗದಿಯಾಗಿದ್ದ ಸೆಮಿಸ್ಟರ್ ಅಂತಿಮ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಡಾ. ಎಂ. ವೆನಿಸ್ಸಾ ತಿಳಿಸಿದ್ದಾರೆ.
ವೇಳಾಪಟ್ಟಿ ಸಿದ್ಧತೆಗೆ ನಿಯಮಾವಳಿ ಪಾಲನೆ
2026ರ ಸೆಮಿಸ್ಟರ್ ಅಂತಿಮ ಪರೀಕ್ಷೆಗಳ ವೇಳಾವಟ್ಟಿ ಹಾಗೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ ಕೆಲವು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಾಂಶುಪಾಲರು ಈ ಸ್ಪಷ್ಟನೆ ನೀಡಿದ್ದಾರೆ.
ಅನುಮೋದಿತ ಶೈಕ್ಷಣಿಕ ಕ್ಯಾಲೆಂಡರ್‌ಗೆ ಅನುಗುಣವಾಗಿಯೇ ಪರೀಕ್ಷೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಸರಕಾರ ಘೋಷಿಸಿರುವ ಯಾವುದೇ ಸಾರ್ವಜನಿಕ ರಜಾ ದಿನಗಳಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಲಾಗಿಲ್ಲ. ಪಠ್ಯಕ್ರಮದ ಭಾಗವಾಗಿ ಈಗಾಗಲೇ ಇಂಟರ್ನ್‌ಶಿಪ್ ಹಾಗೂ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಬದ್ಧತೆಗಳನ್ನೂ ಪರಿಗಣಿಸಿ ಈ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಆಕ್ಷೇಪಣೆಗೆ ನೀಡಲಾಗಿತ್ತು 15 ದಿನಗಳ ಕಾಲಾವಕಾಶ
ಪರೀಕ್ಷೆಗಳ ಕರಡು ವೇಳಾಪಟ್ಟಿಯನ್ನು ಸೆಪ್ಟೆಂಬರ್ 11, 2026 ರಂದೇ ಪ್ರಕಟಿಸಲಾಗಿತ್ತು. ವೇಳಾಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಅಥವಾ ಅಗತ್ಯ ಬದಲಾವಣೆಗಳನ್ನು ಸೂಚಿಸಲು ವಿದ್ಯಾರ್ಥಿಗಳಿಗೆ 15 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. ಆದರೆ, ವಿದ್ಯಾರ್ಥಿಗಳಿಂದ ಯಾವುದೇ ಆಕ್ಷೇಪಣೆಗಳಾಗಲಿ ಅಥವಾ ಪರೀಕ್ಷಾ ದಿನಾಂಕಗಳ ಬದಲಾವಣೆಗೆ ಸಂಬಂಧಿಸಿದ ಮನವಿಗಳಾಗಲಿ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಂದು ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು ಎಂದು ಪ್ರಾಂಶುಪಾಲರು ವಿವರಿಸಿದ್ದಾರೆ.

ಪೂರ್ವ ಮಾಹಿತಿ ಇಲ್ಲದ ಪ್ರತಿಭಟನೆ; ಪೊಲೀಸ್ ಭದ್ರತೆ
ಪ್ರತಿಭಟನೆಯ ಕುರಿತು ಕಾಲೇಜಿಗೆ ಮೊದಲ ಬಾರಿಗೆ ಅಕ್ಟೋಬರ್ 11 ರಂದು ರಾತ್ರಿ 11:36ಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜು ಆಡಳಿತವು ಪೊಲೀಸ್ ಆಯುಕ್ತರ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿತ್ತು. ಅಕ್ಟೋಬರ್ 12 ರಂದು ಕಾಲೇಜು ಆಡಳಿತಕ್ಕೆ ಯಾವುದೇ ಪೂರ್ವ ಮಾಹಿತಿ ನೀಡದೆ ಅಥವಾ ಲಿಖಿತ ಮನವಿ ಸಲ್ಲಿಸದೆ ಕೆಲವು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘದ ಧುರೀಣರು ಪ್ರತಿಭಟನೆ ನಡೆಸಿ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂದು ಅವರು ವಿಷಾದಿಸಿದ್ದಾರೆ.
ಅಶಿಸ್ತಿನ ವರ್ತನೆಗೆ ಕಠಿಣ ಕ್ರಮದ ಎಚ್ಚರಿಕೆ
ಕಾಲೇಜಿನ ಎಲ್ಲಾ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ನಿರ್ಧಾರಗಳು ನಿಯಮಾವಳಿಗಳು ಮತ್ತು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳ ನಿರ್ದೇಶನಗಳಿಗೆ ಅನುಗುಣವಾಗಿಯೇ ಕೈಗೊಳ್ಳಲಾಗುತ್ತದೆ. ಸಂತ ಆಗ್ನೆಸ್ ಕಾಲೇಜು ಜಾತ್ಯತೀತತೆ, ಸಮಾನತೆ, ಧಾರ್ಮಿಕ ಸಾಮರಸ್ಯ ಹಾಗೂ ಪರಸ್ಪರ ಗೌರವದ ತತ್ವಗಳನ್ನು ಸದಾ ಎತ್ತಿಹಿಡಿದಿದೆ.
ಎಲ್ಲಾ ವಿದ್ಯಾರ್ಥಿಗಳು ಸಂಸ್ಥೆಯ ನಿಗದಿತ ನಿಯಮಗಳು ಹಾಗೂ ಕಾರ್ಯವಿಧಾನಗಳನ್ನು ಗೌರವಿಸಿ, ಶಿಸ್ತು ಮತ್ತು ಘನತೆಯನ್ನು ಕಾಪಾಡಿಕೊಳ್ಳಬೇಕೆಂದು ಕಾಲೇಜು ನಿರೀಕ್ಷಿಸುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಶಿಸ್ತಿನ ವರ್ತನೆ, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಪ್ರಯತ್ನ ಅಥವಾ ಕಾಲೇಜು ಆವರಣದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಅಂತಹ ಘಟನೆಗಳ ವಿರುದ್ಧ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಡಾ. ಎಂ. ವೆನಿಸ್ಸಾ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.
