ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸ್ಥಾಪಕ ಡಾ. ಸಿಎ ಎ. ರಾಘವೇಂದ್ರ ರಾವ್ (89) ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ ಪುತ್ರ ಸಿಎ ಶ್ರೀನಿವಾಸ ರಾವ್ ಮತ್ತು ಪುತ್ರಿ ಪದ್ಮಿನಿ ರಾವ್ ಇದ್ದಾರೆ.

ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಬೆಳಗ್ಗೆ 11 ಗಂಟೆಗೆ ಮುಕ್ಕ ಶ್ರೀನಿವಾಸ ಕಾಲೇಜುಗಳ ಕ್ಯಾಂಪಸ್‌ನಲ್ಲಿ ಇರಿಸಲಾಗುತ್ತದೆ. ಮಧ್ಯಾಹ್ನದ ನಂತರ ಅಂತಿಮ ಸಂಸ್ಕಾರ ನಡೆಯಲಿದೆ.
ನಗರದ ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್, ಶಿಕ್ಷಣ ತಜ್ಞ ಮತ್ತು ಉದ್ಯಮಿಯಾಗಿದ್ದು, 1988ರಲ್ಲಿ ಎ. ಶಾಮ ರಾವ್ ಫೌಂಡೇಶನ್ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದು, 18ಕ್ಕೂ ಹೆಚ್ಚು ವೃತ್ತಿಪರ ಕಾಲೇಜುಗಳು ಮತ್ತು ಶ್ರೀನಿವಾಸ ಪರಿಗಣಿತ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದಾರೆ. ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮೆಡಿಕಲ್, ಡೆಂಟಲ್, ಫಿಸಿಯೋಥೆರಪಿ ಮತ್ತು ಶಿಕ್ಷಣ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ.

