canaratvnews

*ಬಂಟ್ವಾಳದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದ ‘ಸೌಹಾರ್ದ ಇಫ್ತಾರ್ ಕೂಟ’: ಭಾವೈಕ್ಯತೆಯ ಸಂದೇಶ

ಬಂಟ್ವಾಳ: ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಭಾತೃತ್ವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ‘ಸೌಹಾರ್ದ ಇಫ್ತಾರ್ ಕೂಟ’ವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ. ರಮಾನಾಥ ರೈ ಅವರು, “ಸೌಹಾರ್ದತೆ ಎಂಬ ಪದಕ್ಕೆ ನೈಜ ಶಕ್ತಿ ತುಂಬುವುದೇ ಈ ಕಾರ್ಯಕ್ರಮದ ಉದ್ದೇಶ. ಧಾರ್ಮಿಕ ಮುಖಂಡರು ನೀಡುವ ಶಾಂತಿ ಸಂದೇಶದಂತೆ ನಾವೆಲ್ಲರೂ ಪರಸ್ಪರ ಪ್ರೀತಿ-ವಿಶ್ವಾಸದಿಂದ ಒಂದಾಗಿ ಜೀವಿಸಬೇಕು,” ಎಂದರು.

ಮಾಣಿಲ ಶ್ರೀ ಧಾಮದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಸಂದೇಶ ನೀಡಿ “ಸರ್ವರ ಮನ ಸೆಳೆಯುವ ಮತ್ತು ಐಕ್ಯತೆ ಮೂಡಿಸುವ ರಮಾನಾಥ ರೈ ಅವರ ಈ ಕಾರ್ಯ ಶ್ಲಾಘನೀಯ. ಸವಾಲುಗಳ ಮಧ್ಯೆಯೂ ಮನುಷ್ಯ ಪ್ರೀತಿಯಿಂದ ಬದುಕುವುದು ಇಂದಿನ ಅಗತ್ಯ,” ಎಂದರು.

ಬಂಟ್ವಾಳ ವಲಯ ಪ್ರಧಾನ ಧರ್ಮಗುರು ರೆ.ಫಾ. ವಿಕ್ಟರ್ ಡಿಸೋಜಾ ಮಾತನಾಡಿ “ಯಾವುದೇ ಜಾತಿ-ಮತದ ಭೇದವಿಲ್ಲದೆ ಒಂದೇ ತಾಯಿಯ ಮಕ್ಕಳಂತೆ ಸೌಹಾರ್ದಯುತವಾಗಿ ಬದುಕೋಣ,” ಎಂದು ಕರೆ ನೀಡಿದರು.

ಮಂಗಳೂರು ಶಾಂತಿ ಪ್ರಕಾಶನ ಅಧ್ಯಕ್ಷ ಮುಹಮ್ಮದ್ ಕುಂಞ ಮಾತನಾಡಿ”ನಮ್ಮನ್ನು ನಾವು ನಿಯಂತ್ರಿಸಿ ಕೊಳ್ಳುವುದೇ ಉಪವಾಸದ ಮುಖ್ಯ ಉದ್ದೇಶ. ದ್ವೇಷ ದೂರಮಾಡಿ ಮನುಷ್ಯತ್ವ ಉಳಿಸುವ ಇಂತಹ ಇಫ್ತಾರ್ ಕೂಟಗಳು ಏಕತೆಯನ್ನು ಬಲಪಡಿಸುತ್ತವೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೆಹರು ನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ, ಪ್ರಮುಖರಾದ ಪದ್ಮರಾಜ್, ಯು.ಟಿ. ಇಫ್ತಿಕರ್, ಅಶ್ವನಿಕುಮಾರ್ ರೈ, ಪ್ರಕಾಶ್ ಶೆಟ್ಟಿ ತುಂಬೆ, ಪಿಯೂಸ್ ಎಲ್ ರೊಡ್ರಿಗಸ್, ಬೇಬಿ ಕುಂದರ್, ಅಬ್ಬಾಸ್ ಆಲಿ, ನವಾಜ್ ಬಡಕಬೈಲು, ಮಹಮ್ಮದ್ ನಂದಾವರ ಹಾಗೂ ಹಲವಾರು ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು. ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Share News
Exit mobile version