ಮಂಗಳೂರು ಸೆ 26: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಶಾಲೆಟ್ ಪಿಂಟೋರವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ.
ಅಭಿವೃದ್ಧಿಶೀಲ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ವಿಶಿಷ್ಟ ಸಾಮರ್ಥ್ಯ ಹಾಗೂ ಅನುಭವವನ್ನು ಹೊಂದಿರುವ ಶಾಲೆಟ್ ಪಿಂಟೋ ಅವರ ನೇಮಕವನ್ನು ಕಾಂಗ್ರೆಸ್ ಪಕ್ಷದವರು ಸಂತೋಷದಿಂದ ಸ್ವಾಗತಿಸಿದ್ದಾರೆ.
ಅಂಜಲೋರ್ ಚರ್ಚ್ ನಲ್ಲಿ ಜನಿಸಿದ ಶಾಲೆಟ್ ಪಿಂಟೊ, ಅಂಬೋಸ್ ವಾಸ್ ಹಾಗೂ ಲೀನಾ ವಾಸ್ ದಂಪತಿಯ ಪುತ್ರಿಯಾಗಿದ್ದಾರೆ. ಎಸ್.ಡಿ.ಎಂ. ಲಾ ಕಾಲೇಜಿನಲ್ಲಿ ಬಿ.ಎ. ಲಾ, ಎಲ್.ಎಲ್.ಬಿ. ಪದವಿ ಪಡೆದಿರುವ ಇವರು, ಜೊಸ್ಸಿ ಪಿಂಟೋರವರನ್ನು ವಿವಾಹವಾಗಿದ್ದಾರೆ. ಜೊಸ್ಸಿ ಪಿಂಟೋರವರು ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕಿನ್ನಿಗೋಳಿ ವಲ್ಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಹಿನ್ನಲೆಯಲ್ಲಿ ಶಾಲೆಟ್ ಪಿಂಟೋ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು, 1997ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಹಾಗೂ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಇವರು, ಕಳೆದ ಒಂಬತ್ತು ವರ್ಷಗಳ ಕಾಲ ಪರಿಶ್ರಮಪೂರ್ವಕವಾಗಿ ಪಕ್ಷವನ್ನು ಬಲಪಡಿಸಿದರು. ಅವರ ಪರಿಶ್ರಮ, ಪ್ರಾಮಾಣಿಕತೆ ಮತ್ತು ಪಕ್ಷ ನಿರ್ಮಾಣದ ಶ್ರದ್ಧೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಅವರನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿದೆ.