canaratvnews

ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ; ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಾಗೂ ಮಹಿಳಾ ಸಬಲೀಕರಣದ‌ ದಿಟ್ಟ ಯೋಜನೆಯಾದ ಶಕ್ತಿ ಯೋಜನೆಯು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ಅತಿ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುವ (2023ರ ಜೂನ್ 11 ರಿಂದ 2025 ರ ಜುಲೈ 25 ಅವಧಿ) 5 ಬಿಲಿಯನ್, 49‌ ಮಿಲಿಯನ್, 426 ಸಾವಿರ, 417 ಮಹಿಳೆಯರು ಅಂದರೆ 500 ಕೋಟಿ ಮಹಿಳಾ ಪ್ರಯಾಣಿಕರ ಟಿಕೆಟ್ ಪ್ರಯಾಣವು ವಿಶ್ವ ದಾಖಲೆಯಲ್ಲಿ ಸ್ಥಾನ‌ ಪಡೆದಿದೆ.

ಈ‌‌ ಚಾರಿತ್ರಿಕ ಸಾಧನೆಯು ಕೆಎಸ್‌ಆರ್‌ಟಿ‌ಸಿ, ಬಿಎಂಟಿಸಿ ವಾ‌ಯವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ‌ ಆಡಳಿತ ಮಂಡಳಿ ಸಾರಿಗೆ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸಾರಿಗೆ ಇಲಾಖೆಯ ಕಾರ್ಯದರ್ಶಿ, ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಮರ್ಪಿಸಲಾಗಿದೆ.

ಸಾರಿಗೆ ಸಚಿವನಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ‌ ಕೂಡಲೇ ದೇಶದಲ್ಲೇ ಪ್ರಪ್ರಥಮ ಬಾರಿಗೆ ‌ಜಾರಿಗೆ ತಂದ ಗ್ಯಾರಂಟಿ ಯೋಜನೆಯಾದ ಶಕ್ತಿ‌ ಯೋಜನೆಯು‌ ಅತ್ಯಂತ ಸವಾಲಿನಿಂದ‌ ಕೂಡಿತ್ತು. ಕಳೆದ ಐದಾರು ವರ್ಷದಲ್ಲಿ ಸಾರಿಗೆ ಸಂಸ್ಥೆಗಳಲ್ಲಿ ಹೊಸ‌ ಬಸ್ಸುಗಳ ಸೇರ್ಪಡೆಯಾಗಿಲ್ಲ. ಹೊಸ‌ ನೇಮಕಾತಿ ಆಗಿಲ್ಲ, ಸಾರಿಗೆ ಸಂಸ್ಥೆಗಳು ಸಾಲದ‌ ಸುಳಿಯಲ್ಲಿದ್ದವು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಒಂದು ತಂಡವಾಗಿ ಕರ್ತವ್ಯ ನಿರ್ವಹಿಸಿ ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಮುನ್ನಡೆಸಿರುವುದು ನನಗೆ ವೈಯಕ್ತಿಕವಾಗಿ ಸಂತೃಪ್ತಿ ತಂದಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಾರಿಗೆ ಸಂಸ್ಥೆಗಳಲ್ಲಿ ಹತ್ತು ಹಲವು ಸವಾಲುಗಳಿದ್ದು, ಎಲ್ಲವನ್ನು ನಾನು ಇತ್ಯರ್ಥ ಪಡಿಸಲು ಸಾಧ್ಯವಿಲ್ಲ. ಆದರೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಮತ್ತು ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.ಬಸ್ ಪ್ರಯಾಣದ ಬಗ್ಗೆ ನಡೆಸಿರುವ ಅಧ್ಯಯನದ ವರದಿಯು ಬೆಂಗಳೂರಿನಲ್ಲಿ 23% ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ 21% ಮಹಿಳಾ ಉದ್ಯೋಗಿಗಳ ಸಂಖ್ಯೆಯು ಶಕ್ತಿ ಯೋಜನೆಯಿಂದ ಹೆಚ್ಚಳವಾಗಿದೆಯೆಂದು ತಿಳಿಸಿದೆ.

ವಿಶ್ವ ದಾಖಲೆಗೆ ಸೇರ್ಪಡೆಯಾದ ಶಕ್ತಿ ಯೋಜನೆಯಲ್ಲಿ ತೊಡಗಿಸಿಕೊಂಡ ಪ್ರತಿಯೊಬ್ಬರಿಗೂ ಇಂದು ಹೆಮ್ಮೆ ಮತ್ತು ಗೌರವ. ಶಕ್ತಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ‌ ಬೇರೆ ಬೇರೆ ಹೆಸರು, ಬದಲಾವಣೆಗಳೊಂದಿಗೆ ಜಾರಿಗೆ ತರಲಾಗುತ್ತಿರುವುದೇ ನಮ್ಮ ಸರ್ಕಾರದ ಶಕ್ತಿ‌ ಯೋಜನೆಯ ಯಶಸ್ಸಿಗೆ ಹಿಡಿ‌ದ ಕೈಗನ್ನಡಿಯಾಗಿದೆ.

Share News
Exit mobile version